ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ
ಹೋಬಳಿಯ ಪೂಮಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎ.ಟಿ.ದೇವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದಿನ ಅಧ್ಯಕ್ಷರಾಗಿದ್ದ ಪ್ರಸನ್ನಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಎ.ಟಿ.ದೇವರಾಜ್ ಹೊರತುಪಡಿಸಿ ಮತ್ತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ನಂತರ ನೂತನ ಅಧ್ಯಕ್ಷ ಎ.ಟಿ.ದೇವರಾಜ್ ಮಾತನಾಡಿ, ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‍ನ ನಿರ್ದೇಶಕರಾದ ಶಾಸಕ ಸಿ.ಎನ್. ಬಾಲಕೃಷ್ಣರವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ನಮ್ಮ ಸಂಘ ಈಗಾಗಲೇ 1600 ರೈತರಿಗೆ ಬೆಳೆ ಸಾಲ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಗುಂಪು ಸಾಲ, ವಾಹನ ಮತ್ತು ವ್ಯಾಪಾರ ಸಾಲ, ಪಿಗ್ಮಿ ಸಾಲ ಸೇರಿದಂತೆ ಅಂದಾಜು 17 ಕೋಟಿ ವ್ಯವಹಾರ - ವಹಿವಾಟು ನಡೆಸುತ್ತಿದ್ದು, ಮುಂದೆಯು ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ, ಪಹಣಿ, ವಿತರಣೆ ಹಾಗೂ ಹೆಚ್ಚುವರಿ ಸಾಲ ಸೌಲಭ್ಯ ಸೇರಿದಂತೆ ರೈತರ ಪರವಾಗಿ ಉತ್ತಮ ಕೆಲಸ ಮಾಡಲಾಗುವುದು. ಎಲ್ಲಾ ನಿರ್ದೇಶಕರ ಸಮನ್ವಯದೊಂದಿಗೆ ಷೇರುದಾರರು ಹಾಗೂ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್. ಮಧು ಚುನಾವಣೆ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಪಿ.ಕೆ.ಮಂಜೇಗೌಡ, ಸೊಸೈಟಿ ಮಾಜಿ ಅಧ್ಯಕ್ಷ ಡಿ.ಎನ್.ಬಸವರಾಜ್, ಬೋರೇಗೌಡ, ಉಪಾಧ್ಯಕ್ಷೆ ಪ್ರಮೀಳಾ ರಂಗೇಗೌಡ, ಬಿ.ಕೆ.ವಾಸುದೇವ, ಪ್ರಭು, ಮಲ್ಲೇಶ್, ಬಾಬು, ನಿರ್ದೇಶಕರಾದ ಬಿ.ಎನ್. ನಾಗೇಗೌಡ, ಬಿ.ಸಿ.ನಂಜೇಗೌಡ, ಶ್ರೀನಿವಾಸ್, ಧರಣೇಂದ್ರ, ಸುನಿಲ್ ಕುಮಾರ್, ಪ್ರಸನ್ನ, ದೊಡ್ಡೇಗೌಡ, ರೇಣುಕಮ್ಮ, ರಾಮಯ್ಯ, ಕಾಂತರಾಜಪುರ ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ, ಸಿಇಒ ಪ್ರಕಾಶ್ ಮತ್ತು ಸಿಬ್ಬಂದಿ ವರ್ಗ ಹಾಗೂ ಷೇರುದಾರರು ಉಪಸ್ಥಿತರಿದ್ದರು.