ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಮುಖ್ಯಮಂತ್ರಿ ಅಭಿವೃದ್ಧಿ ಹರಿಕಾರ ಡಿ.ದೇವರಾಜ ಅರಸುರವರ 109ನೇ ಜಯಂತಿಯನ್ನು ಆ.20ರಂದು ಎಲ್ಲಾ ಸರ್ಕಾರಿ ಕಚೇರಿ, ಶಾಲಾ, ಕಾಲೇಜು ಹಾಗೂ ಎಲ್ಲಾ ಹಾಸ್ಟೆಲ್‌ಗಳಲ್ಲಿ ಆಚರಣೆ ಮಾಡಲು ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ತುಂಗಭದ್ರಾ ಸಭಾಂಗಣದಲ್ಲಿ ಶಿಷ್ಟಾಚಾರದನ್ವಯ ಹಮ್ಮಿಕೊಳ್ಳಲು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಿ.ದೇವರಾಜ ಅರಸು ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಬೆಳಗ್ಗೆ 11ಕ್ಕೆ ಬಿಎಸ್ಎನ್ಎಲ್ ಕಚೇರಿ ಮುಂಭಾಗದಲ್ಲಿರುವ ಡಿ.ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮತ್ತು ಪೂಜಾ ಕಾರ್ಯಕ್ರಮ ನಡೆಸಿ, ನಂತರ ಜಿಲ್ಲಾಡಳಿತ ಭವನದಲ್ಲಿರುವ ತುಂಗಾಭದ್ರ ಸಭಾಂಗಣದಲ್ಲಿ ವೇದಿಕೆ ಸಮಾರಂಭದ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು. ಪುತ್ಥಳಿ ಸ್ಥಳದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗದಂತೆ ನಿರ್ವಹಣೆ ಮಾಡಲು ತಿಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಅರಸು ಕುರಿತಂತೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲು ಮತ್ತು ಎಲ್ಲಾ ಹಾಸ್ಟೆಲ್‌ಗಳಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಆಯೋಜಿಸಲು ತಿಳಿಸಿ, ಅರಸು ಕುರಿತ ಮಾಹಿತಿಯುಳ್ಳ ಕಿರುಪುಸ್ತಕ ಸಂಗ್ರಹಿಸಿ ನೀಡಲು ಮತ್ತು ಕಾರ್ಯಕ್ರಮದ ಸ್ಥಳದಲ್ಲಿ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಅವರು ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ, ಕ್ರೀಡೆ, ಡಿ.ದೇವರಾಜ ಅರಸು ಭಾವಚಿತ್ರ ಬಿಡಿಸುವುದು, ರಂಗೋಲಿ ಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಪಾಲಿಕೆ ಆಯುಕ್ತರಾದ ರೇಣುಕಾ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಧ್ಯಕ್ಷ ತಿಪ್ಪೇಶ್, ಯಾದವ ಸಮಾಜದ ಖಜಾಂಚಿ ಏಕಾಂತಪ್ಪ, ಗೊಂದಾಳಿ ಸಮಾಜದ ವೀರೇಶ್ ರಾವ್ ಉಪಸ್ಥಿತರಿದ್ದರು.