ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗ ಹಾಗೂ ಬಡ ಜನರ ಉದ್ಧಾರಕ್ಕಾಗಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಜನಮನದಲ್ಲಿ ಅಜರಾಮರರಾಗಿದ್ದಾರೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ನಡೆದ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಸು ಅವರು ತೆಗೆದುಕೊಂಡ ನಿರ್ಣಯಗಳಿಂದ ಇಂದಿಗೂ ರಾಜ್ಯದ ಲಕ್ಷಾಂತರ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರೈತರಿಗೆ ಹಕ್ಕುಪತ್ರ ವಿತರಣೆ, ಜೀತ ಪದ್ಧತಿಯ ನಿರ್ಮೂಲನೆ, ಬ್ಯಾಂಕ್‌ಗಳ ರಾಷ್ಟ್ರೀಕರಣ ಹೀಗೆ ಹಲವು ಸಾಮಾಜಿಕ ಕ್ರಾಂತಿಗಳನ್ನು ಅವರು ಜಾರಿಗೊಳಿಸಿದ್ದರು ಎಂದು ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಇಂಗ್ಲಿಷ್ ಶಿಕ್ಷಣಕ್ಕೆ ಆದ್ಯತೆ ನೀಡುವುದು ಯುವಜನತೆಗೆ ಉದ್ಯೋಗದ ಹಾದಿ ತೆರೆದಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯಲು ಸದನದ ಗಮನ ಸೆಳೆಯಲಾಗಿದ್ದು, ಅರಸೀಕೆರೆ ತಾಲೂಕಿಗೆ ಐದು ಕೆಪಿಎಸ್ ಶಾಲೆಗಳ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಇನ್ನೂ ಎರಡು ವಸತಿ ಶಾಲೆಗಳ ಅಗತ್ಯವಿದೆ. ಶಿಕ್ಷಣ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು "ಎರಡನೇ ದೇವರಾಜ ಅರಸು " ಎನ್ನುವುದು ತಪ್ಪಲ್ಲ. ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಗಂಗಾ ಕಲ್ಯಾಣ, ನಿಗಮಗಳ ಸ್ಥಾಪನೆ, ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳು ಇಂದಿಗೂ ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದು ಪ್ರಶಂಸಿಸಿದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ವಸತಿ ನಿಲಯಗಳಲ್ಲಿ ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಉಪಯೋಗಿಸಿಕೊಂಡು ವಿದ್ಯಾಭ್ಯಾಸದಲ್ಲಿ ಮುನ್ನಡೆಯಬೇಕು. ದೇವರಾಜ ಅರಸು ಅವರ ಕೊಡುಗೆಗಳು ರಾಜ್ಯದ ಹಿಂದುಳಿದ ಮತ್ತು ಬಡ ಜನರ ಏಳಿಗೆಗೆ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಾಲ್ಲೂಕು ಹಿಂದುಳಿದ ವರ್ಗ ಕಲ್ಯಾಣಾಧಿಕಾರಿ ಯಶೋದಾ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಜಯಣ್ಣ, ಬಿಸಿಯೂಟ ಯೋಜನೆ ನಿರ್ದೇಶಕ ಯೋಗೀಶ್, ವಸತಿ ನಿಲಯಗಳ ಮೇಲ್ವಿಚಾರಕ ಸೋಮಶೇಖರ್ ಸೇರಿದಂತೆ ವಸತಿ ನಿಲಯಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.