ಕನ್ನಡಪ್ರಭ ವಾರ್ತೆ ತುಮಕೂರು
ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಿ ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಬಡ ಜನರ ಆಶಾಕಿರಣವಾಗಿರುವ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ ನೀಡಿದರು.ನಗರದ ಟೌನ್‌ಹಾಲ್ ವೃತ್ತದಲ್ಲಿರುವ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆಯಲ್ಲಿ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯವನ್ನು ರಾಜ್ಯದಲ್ಲಿ ಚಾಚೂ ತಪ್ಪದೇ ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಅಂದರೆ ಡಿ. ದೇವರಾಜ ಅರಸುರವರು ಎಂದು ಅವರು ಹೇಳಿದರು.ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಡಿ. ದೇವರಾಜ ಅರಸುರವರು ರಾಜ್ಯದಲ್ಲಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಿ ಬಡವರ ಆಶಾಕಿರಣವಾಗಿದ್ದಾರೆ ಎಂದರು.
ಉಳುವವನೇ ಭೂಮಿ ಒಡೆಯ ಎಂಬ ಯೋಜನೆ ಜಾರಿಗೊಳಿಸಿ 4 ಎಕರೆ ಜಮೀನು ನೀಡುವ ಮೂಲಕ ಬಡವರಿಗೆ ಶಕ್ತಿ ತುಂಬಿದ್ದಾರೆ. ಇದರೊಂದಿಗೆ ಯಾರಿಗೆ ಶಕ್ತಿ ಇಲ್ಲವೋ, ಧ್ವನಿ ಇಲ್ಲವೋ ಅಂತಹ ಸಮುದಾಯದ ಜನರ ಧ್ವನಿಯಾಗಿ ಅರಸುರವರು ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಸದಾ ಸ್ಮರಣೀಯ ಎಂದರು.ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಶಾನುಭೋಗರು, ಪಟೇಲರ ಪದ್ಧತಿ ಚಾಲ್ತಿಯಲ್ಲಿತ್ತು. ಈ ವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಅರಿತ ಅರಸುರವರು ಅಂದೇ 500 ಗ್ರಾಮ ಆಡಳಿತಾಧಿಕಾರಿಗಳ ನೇಮಕ ಮಾಡಿದರು. ಈ ಗ್ರಾಮ ಆಡಳಿತಾಧಿಕಾರಿಗಳ ನೇಮಕ ವ್ಯವಸ್ಥೆ ಇಂದಿಗೂ ಸಹ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಆಶ್ರಯ ಯೋಜನೆ, ಜನತಾ ಮನೆಗಳ ಯೋಜನೆಯನ್ನು ಅರಸುರವರು ಜಾರಿಗೊಳಿಸಿ ಬಡವರಿಗೆ ಸೂರು ಒದಗಿಸಿದರು. ಈ ಯೋಜನೆಯನ್ನು ನಗರ ಪ್ರದೇಶವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ಜಾರಿಗೊಳಿಸಬೇಕು ಎಂದು ಸಹ ಅರಸುರವರು ಯೋಚನೆ ಮಾಡಿ, ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.ಕಲಾವಿದರ ಸಂಕಷ್ಟ ಅರಿತ ಅರಸುರವರು ಕಲಾವಿದರಿಗೆ ಪಿಂಚಣಿ ನೀಡುವ ಯೋಜನೆಯನ್ನು ಸಹ ಪ್ರಾರಂಭಿಸಿದರು. ಈ ಮೂಲಕ ಅವರು ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅರಸರುರವರ ತತ್ವಾದರ್ಶಗಳನ್ನು ನಾವೆಲ್ಲರೂ ಚಾಚೂ ತಪ್ಪದೇ ಪಾಲಿಸಬೇಕು. ಇದರೊಂದಿಗೆ ನಮ್ಮ ಕೈಲಾದಷ್ಟು ಸಾಮಾಜಿಕ ಸೇವೆಯನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ನಾಗಣ್ಣ ಮಾತನಾಡಿ, ಪಟೇಲರು, ಶಾನುಭೋಗರು ಹಾಗೂ ಗೌಡರ ಜಮೀನುಗಳನ್ನು ಉಳುಮೆ ಮಾಡುತ್ತಿದ್ದ ಬಡವರನ್ನೇ ಮಾಲೀಕರನ್ನಾಗಿ ಮಾಡುವ ಉದ್ದೇಶದಿಂದ ಉಳುವವನೇ ಭೂಮಿ ಒಡೆಯ ಎಂಬ ಐತಿಹಾಸಿಕ ಕಾನೂನನ್ನು ಜಾರಿಗೊಳಿಸಿದರು. ಎಷ್ಟೇ ಒತ್ತಡ ಇದ್ದರೂ ಯಾವುದಕ್ಕೂ ಜಗ್ಗದೆ, ಬಗ್ಗದೆ ಬಡವರು, ಹಿಂದುಳಿದವರು ಹಾಗೂ ಶೋಷಿತರ ಏಳ್ಗೆಗೆ ಶ್ರಮಿಸಿದರು ಎಂದು ಬಣ್ಣಿಸಿದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ರಾಜೀವ್‌ಗಾಂಧಿ, ದೇವರಾಜ ಅರಸುರವರ ಅನುಯಾಯಿಗಳಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರು ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ಪರಿಕಲ್ಪನೆಯನ್ನು ತಂದು ಮಹಿಳೆಯರು, ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಚಿಂತನಾ ಬಳಗದ ಮುಖ್ಯಸ್ಥರಾದ ಕೆ.ಪಿ. ಲಕ್ಷ್ಮೀಕಾಂತ ರಾಜೇ ಅರಸು ಡಿ. ದೇವರಾಜು ಅರಸು ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಹಿಂದುಳಿದ ಸಮುದಾಯದ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ. ಕೆ.ವಿ. ಕೃಷ್ಣಮೂರ್ತಿ, ಸಂಘಟನೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆ.ವಿ. ಅಜಯಕುಮಾರ್, ಪದ್ಮನಾಭ (ಮಧು), ಆರ್. ಅನಿಲ್‌ಕುಮಾರ್, ಗುರುರಾಘವೇಂದ್ರ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಹಾನಗರ ಪಾಲಿಕೆ ಬಿ.ವಿ. ಅಶ್ವಿಜ, ಅಡಿಷನಲ್ ಎಸ್ಪಿ ಗೋಪಾಲ್, ಜಿಲ್ಲಾ ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ ಹಾಗೂ ಕಲ್ಯಾಣಾಧಿಕಾರಿ ರಂಗಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ರವಿಕುಮಾರ್, ಜಿಲ್ಲಾ ಪತ್ರಾಂಕಿತ ವ್ಯವಸ್ಥಾಪಕರಾದ ವನಜಾಕ್ಷಮ್ಮ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಟಿ.ಎಸ್. ಮಧುಕರ್, ಜಿಲ್ಲಾಧ್ಯಕ್ಷ ಧನಿಯಕುಮಾರ್, ಮಲ್ಲಸಂದ್ರ ಶಿವಣ್ಣ, ಪಿ. ಮೂರ್ತಿ, ಮಂಜೇಶ್, ನಾಗರಾಜು, ಮೈಲಪ್ಪ, ಡಮರುಗೇಶ್, ಮಹಾಲಿಂಗಯ್ಯ, ಚಿ.ನಿ. ಪುರುಷೋತ್ತಮ್, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.