ಕನ್ನಡಪ್ರಭ ವಾರ್ತೆ ತುಮಕೂರು
ಸಂಪತ್ತು, ಅಧಿಕಾರ, ಅವಕಾಶ ಎಲ್ಲ ವರ್ಗಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಕನಸು ಕಂಡವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರಗೌಡ ತಿಳಿಸಿದ್ದಾರೆ.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ 81ನೇ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರಾಜ ಅರಸು ಅವರು ತಮ್ಮ ಆಡಳಿತದ ಕಾಲದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದರೆ, ರಾಜೀವ್‌ಗಾಂಧಿ ಅವರು ವಿಜ್ಞಾನ ತಂತ್ರಜ್ಞಾನದ ಮೂಲಕ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿಸುವ ಗುರಿ ಹೊಂದಿದ್ದರು ಎಂದರು.ಅತಿಕಿರಿಯ ವಯಸ್ಸಿನಲ್ಲಿಯೇ ಪ್ರಧಾನಿಯಾಗಿ, ವಿಮಾನ ನಡೆಸುವವನು ದೇಶ ನಡೆಸಿಯಾನೇ ಎಂಬ ಟೀಕೆಗಳ ನಡುವೆಯೂ ದೇಶವನ್ನು ಎಲ್ಲಾ ರಂಗದಲ್ಲಿಯೂ ಮುನ್ನಡೆಸಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.
ಯುವಜನರು ಸಕ್ರಿಯ ರಾಜಕಾರಣದ ಭಾಗವಾಗಬೇಕೆಂಬ ಉದ್ದೇಶದಿಂದ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ್ದೇ ಅಲ್ಲದೆ, ಪಂಚಾಯತ್ ರಾಜ್ ಪರಿಕಲ್ಪನೆಯ ಮೂಲಕ ತಳ ಸಮುದಾಯಗಳು ಸಹ ಜನಪ್ರತಿನಿಧಿಗಳಾಗಿ ಅಧಿಕಾರ ಚಲಾಯಿಸುವಂತಹ ಅವಕಾಶ ಕಲ್ಪಿಸಿದವರು ರಾಜೀವ್‌ಗಾಂಧಿ ಎಂದರು.ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಅವರು ಸೋಲು ಅನುಭವಿಸಿದಾಗ, ಅವರನ್ನು ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ, ಗೆಲ್ಲಿಸುವ ಮೂಲಕ ರಾಜಕೀಯ ಮರುಜನ್ಮ ನೀಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಮಾತನಾಡಿ, ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದ ವಿಶಾಲ ಹೃದಯ ಇದ್ದವರು ದೇವರಾಜ ಅರಸು ಎಂದರು.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್ ಕುಮಾರ್, ಕೆಪಿಸಿಸಿ ಹಿಂದುಳಿದ ವರ್ಗದ ಮಹಿಳಾ ಕಾರ್ಯದರ್ಶಿ ನಾಗಮಣಿ, ಮುಖಂಡರಾದ ಎಚ್.ಸಿ.ಹನುಮಂತಯ್ಯ, ಷಣ್ಮುಗಪ್ಪ, ಇರ್ಫಾನ್ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಮಂಗಳವಾರ ನಿಧನರಾದ ಕಾಂಗ್ರೆಸ್ ಮುಖಂಡರಾದ ವಸುಂಧರಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಖಂಡರಾದ ಕೆಂಪಣ್ಣ, ನಟರಾಜು, ಪಂಚಾಕ್ಷರಯ್ಯ, ವಾಲೆಚಂದ್ರಯ್ಯ, ಕೈದಾಳ ರಮೇಶ್, ಸಂಜೀವ ಕುಮಾರ್, ಅಂಬರೀಷ್, ಡಿಪೋ ರಮೇಶ್, ಐಎನ್‌ಟಿಯುಸಿಯ ಗೋವಿಂದರಾಜು, ನವಾಜ್, ಪಿ.ಶಿವಾಜಿ, ಸುಜಾತ, ಸೌಭಾಗ್ಯ, ಡಾ.ಫರ್ಹಾರನಾ ಬೇಗಂ, ವಿಜಯಲಕ್ಷ್ಮೀ, ಕವಿತಾ, ಮಲ್ಲಿಕಾರ್ಜುನ ಮೆಳೆಹಳ್ಳಿ, ಕೆಂಪರಾಜು, ಡಿಸಿಸಿ ಉಪಾಧ್ಯಕ್ಷ ಹೆಬ್ಬೂರು ಶ್ರೀನಿವಾಸಮೂರ್ತಿ, ಮುಬೀನಾ, ಪ್ರೇಮ, ಭಾಗ್ಯ, ಪಂಡಿತ್ ನಾರಾಯಣಪ್ಪ, ಆತೀಕ್ ಅಹಮದ್, ಸೇವಾದಳದ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.