ಚನ್ನಪಟ್ಟಣದಲ್ಲಿ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದ ದೇವೇಗೌಡ

KannadaprabhaNewsNetwork | Published : Nov 11, 2024 12:49 AM

ಸಾರಾಂಶ

ಚನ್ನಪಟ್ಟಣ: ನಾನು ಒಕ್ಕಲಿಗರ ಮಗ, ರೈತನ ಮಗ ನೀವೆಲ್ಲಾ ರೈತರ ಮಕ್ಕಳೇ. ನಾವೆಲ್ಲಾ ಬೆವರು ಹರಿಸಿ ದುಡಿದು ಬದುಕುತ್ತಿದ್ದೇವೆ. ನಮ್ಮ ಹುಟ್ಟುಗುಣ ಬೇರೆಯವರಿಂದ ಕಿತ್ತುಕೊಳ್ಳುವುದಿಲ್ಲ. ದುಡಿದು ಕೊಟ್ಟು ತಿನ್ನುತ್ತೇವೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಒಕ್ಕಲಿಗರ ಕಾರ್ಡ್ ಪ್ಲೇ ಮಾಡಿದ್ದಾರೆ.

ಚನ್ನಪಟ್ಟಣ: ನಾನು ಒಕ್ಕಲಿಗರ ಮಗ, ರೈತನ ಮಗ ನೀವೆಲ್ಲಾ ರೈತರ ಮಕ್ಕಳೇ. ನಾವೆಲ್ಲಾ ಬೆವರು ಹರಿಸಿ ದುಡಿದು ಬದುಕುತ್ತಿದ್ದೇವೆ. ನಮ್ಮ ಹುಟ್ಟುಗುಣ ಬೇರೆಯವರಿಂದ ಕಿತ್ತುಕೊಳ್ಳುವುದಿಲ್ಲ. ದುಡಿದು ಕೊಟ್ಟು ತಿನ್ನುತ್ತೇವೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಒಕ್ಕಲಿಗರ ಕಾರ್ಡ್ ಪ್ಲೇ ಮಾಡಿದ್ದಾರೆ.

ಚನ್ನಪಟ್ಟಣದ ಸುಳ್ಳೇರಿ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾವು ದೇಶದ ಜನರನ್ನು ಸಾಕುತ್ತಿದ್ದೇವೆ. ಭೂಮಿ ತಾಯಿಯನ್ನು ನಂಬುತ್ತೇವೆ. ಯಾರನ್ನು ಉಪವಾಸಕ್ಕೆ ಬಿಡುವುದಿಲ್ಲ ಎಂದು ಒಕ್ಕಲಿಗ ಸಮುದಾಯದ ಗುಣಗಾನ ಮಾಡಿದರು.

62 ವರ್ಷದ ಹಿಂದೆ ನಾನು ಶಾಸಕನಾಗಿ ಆಯ್ಕೆಯಾದೆ. ನಾನು ಅಧಿಕಾರಕ್ಕೆ ಬಂದಾಗ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಕುಮಾರಸ್ವಾಮಿ ಕೂಡಾ ಅನೇಕ ಕೆಲಸಗಳನ್ನು ಮಾಡಿದ್ದು, ಎಲ್ಲ ಸಮುದಾಯಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಈಗ ಚನ್ನಪಟ್ಟಣದಲ್ಲಿ ಇಗ್ಗಲೂರು ಅಣೆಕಟ್ಟು ಕಟ್ಟಿದ ಬಗ್ಗೆ ಚರ್ಚೆ ಆಗುತ್ತಿದೆ. ಯಾರು ಅಣೆಕಟ್ಟು ಕಟ್ಟಿದ್ದು ಎಂದು ದೇವೇಗೌಡರು ಪ್ರಶ್ನೆ ಕೇಳಿದಾಗ ನೆರೆದಿದ್ದ ಜನರು ದೇವೇಗೌಡ ಎಂದು ಕೂಗಿದರು.

6 ತಿಂಗಳಿನಿಂದ ಡಿ.ಕೆ. ಶಿವಕುಮಾರ್ ನಾನೇ ಅಭ್ಯರ್ಥಿ ಅಂತ ಓಡಾಡಿದರು. ಅವರು ಶಾಸಕರಾಗಿ ಆಯ್ಕೆಯಾದ ಅವರು ಈಗ ಉಪಮುಖ್ಯಮಂತ್ರಿ ಆಗಿದ್ದಾರೆ. ಹೀಗಿರುವಾಗ ಅವರೇಕೆ ಇಲ್ಲಿ ಸ್ಪರ್ಧೆ ಮಾಡುತ್ತಾರೆ. ಸುಳ್ಳು ಪ್ರಚಾರ ಮಾಡಿ ಕೊನೆ ದಿನ ಇದ್ದಕ್ಕಿದ್ದಂತೆ ತೀರ್ಮಾನ ಬದಲಾಯಿಸಿದರು. ಮತ್ತೊಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ನಾನು ಏನು ಹೇಳಲ್ಲ ನೀವೆ ಅರ್ಥ ಮಾಡಿಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದರು.

ನಿಖಿಲ್ ಕುಮಾರಸ್ವಾಮಿರವರು 2029ರವರೆಗೂ ನಾನು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ ಅಂದಿದ್ದರು. ಇವರು ಯಾವಾಗ ಈ ನಾಟಕ ಆಡಿದರೋ ಆಗ ನಿಖಿಲ್ ಸಿಡಿದೆದ್ದರು. ಮೋದಿ , ಅಮಿತ್ ಶಾ ಹಾಗೂ ನಡ್ಡಾರವರು ಸೇರಿ ನಿಖಿಲ್ ನಿಲ್ಲಿಸಿದ್ದಾರೆ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡುವ ಹೊಣೆಗಾರಿಕೆ ತಾಯಂದಿರ ಮೇಲಿದೆ. ಗೃಹಲಕ್ಷ್ಮಿ ಯೋಜನೆ ಕೊಡಲು ಹಣ ಇಲ್ಲವೆಂದು ನಿಲ್ಲಿಸಿದರು. ಈಗ ಚನ್ನಪಟ್ಟಣಕ್ಕೆ ಮಾತ್ರ ಹಣ ಕೊಡುತ್ತಿದ್ದಾರೆ. ಈ ಸರ್ಕಾರ ದಿವಾಳಿ ಆಗಿದ್ದು, ನ.13ರ ನಂತರ ಆ ಹಣವನ್ನು ನಿಲ್ಲಿಸುತ್ತಾರೆ. ಕುಮಾರಸ್ವಾಮಿ ಅವರನ್ನು ಸೋಲಿಸಲು ಈ ರೀತಿ ಮಾಡಿದ್ದಾರೆ ಎಂದರು.

ಪ್ರಚಾರದ ವೇಳೆ ದೇವೇಗೌಡರು ಚನ್ನಪಟ್ಟಣ ಅಕಿಲ್ ಷಾ ದರ್ಗಾದ ಧರ್ಮ ಗುರು ಸೈಯದ್ ಮನಸ್ನ ಅವರನ್ನು ಭೇಟಿ ಮಾಡಿ ಮೊಮ್ಮಗ ನಿಖಿಲ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಶಾಸಕರಾದ ಸಮೃದ್ಧಿ ಮಜುನಾಥ್ , ಶರಣುಗೌಡ ಕಂದಕೂರ್ ಮತ್ತಿತರರು ಉಪಸ್ಥಿತರಿದ್ದರು.

10ಕೆಆರ್ ಎಂಎನ್ 2,3.ಜೆಪಿಜಿ

2.ಚನ್ನಪಟ್ಟಣ ಕ್ಷೇತ್ರದ ಸುಳ್ಳೇರಿ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಮುಖಂಡರು ಅಭಿನಂದಿಸಿದರು.

3.ಚನ್ನಪಟ್ಟಣ ಅಕಿಲ್ ಷಾ ದರ್ಗಾದ ಧರ್ಮ ಗುರು ಸೈಯದ್ ಮನಸ್ನ ಅವರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಮುಖಂಡರು ಅಭಿನಂದಿಸಿದರು.

Share this article