ಶಾಶ್ವತ ನೀರಿನ ವಲಯ ಬಳಸಿ ಯೋಜನೆ ರೂಪಿಸಿ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ನೀರಿನ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಸದ್ಯ ಬೇಸಿಗೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಸಚಿವ ಖಂಡ್ರೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯ 867 ಜನವಸತಿ ಪ್ರದೇಶಗಳಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು.ಜಿ.ಪಂ ಸಭಾಭವನದಲ್ಲಿಂದು ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಸದ್ಯ ಬೇಸಿಗೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಸಚಿವ ಖಂಡ್ರೆ ಸೂಚನೆ ನೀಡಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಈಗಾಗಲೇ 632 ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಶ್ವತ ನೀರಿನ ವಲಯ ಬಳಸಿ ನೀರು ಸರಬರಾಜು ಯೋಜನೆ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.ಜಿಲ್ಲೆಯಲ್ಲಿ ಸರ್ವನಜನಿಕರು ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ವೈದ್ಯಾಧಿಕಾರಿಗಳು ಪ್ರಮಾಣಿಕ ಸೇವೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.ಈವರೆಗೆ ಬಾಣಂತಿಯರು ಮರಣ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲೆಯಲ್ಲಿ ಗರ್ಭಿಣಿ ಹಾಗೂ ಹೆರಿಗೆ ಪ್ರಕರಣಗಳಲ್ಲಿ ಸೂಕ್ತ ಔಷಧೋಪಚಾರ ಹಾಗೂ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರುಗಡೆ ಅವರಿಗೆ ಸೂಚಿಸಿದರು.ಬ್ರಿಮ್ಸ್‌ನಲ್ಲಿ ಅವ್ಯವಸ್ಥೆ ಸರಿಪಡಿಸಲು ಡಿ.ಎಚ್.ಓ., ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಬ್ರಿಮ್ಸ್ ನಿರ್ದೇಶಕರು ಚರ್ಚಿಸಿ ಸಹಕಾರದಿಂದ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಕ್ರಮ ವಹಿಸುವಂತೆ ತಿಳಿಸಿದರು. ಮಾರ್ಚ ಒಳಗಾಗಿ ಕ್ಯಾಥಲ್ಯಾಬ್ ಆರಂಭಿಸುವಂತೆ ಸೂಚಿಸಿದರು. ಡಯಾಲಿಸಿಸ್ ರೋಗಿಗಳಿಗೆ ಬ್ರಿಮ್ಸ್‌ನಲ್ಲಿ ಕಾಯುವ ಸ್ಥೀತಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇನ್ನೆರಡು ಡಯಾಲಿಸಿಸ್ ಯಂತ್ರ ಬೇಕಿದ್ದಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ನೀಡಲಾಗುವುದು. ಆದರೆ ಡಯಾಲಿಸಿಸ್ ರೋಗಿಗಳಿಗೆ ಸಮಸ್ಯೆಯಾಗದಂತೆ ವೈದ್ಯರು 3 ಶಿಫ್ಟ್‌ಗಳಲ್ಲಿ ಚಿಕಿತ್ಸೆ ನೀಡುವಂತೆ ಸಚಿವರು ಸೂಚಿಸಿದರು. ಅಲ್ಲದೇ 10 ದಿನದೊಳಗೆ ಕ್ರಮ ವಹಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳುವ ಬಗ್ಗೆಯೂ ಎಚ್ಚರಿಸಿದರು.ಕ್ಯಾನ್ಸರ್ ಪೀಡಿತ ರೋಗಿಗಳು ಜಿಲ್ಲೆಯ ಹೊರಗೆ ಕಿಮೋಥೆರೆಪಿ ಪಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬ್ರಿಮ್ಸ್‌ನಲ್ಲಿ ಈಗಾಗಲೇ ಡೇ ಕೇರ್ ಕೀಮೋ ಕೇಂದ್ರ ಆರಂಭಗೊಂಡಿರುವ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಡಾ.ನಿರಗುಡೆ ಅವರಿಗೆ ಸೂಚಿಸಿದರು. ಬ್ರಿಮ್ಸನ ವಾರ್ಡಿನಲ್ಲಿ ಈವರೆಗೆ 96 ಜನ ಕೀಮೋ ಥೆರೆಪಿ ಪಡೆಯುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು.ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಪ್ತಪಡಿಸಿದ ಸಚಿವರು ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ವರ್ಷಕ್ಕೆ 300 ಅಪಘಾತಗಳು ಆಗುತ್ತಿರುವ ಬಗ್ಗೆ ಆರ್.ಟಿ.ಓ. ಸಚಿವರ ಗಮನಕ್ಕೆ ತಂದರು. ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಉತ್ತಮ ಸಿಸಿ ಟಿವಿ ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಬಾಕಿಯಿರುವ ಎಲ್ಲ ಅಂಗನವಾಡಿ ಕಟ್ಟಡಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಹಾಗೂ ಸ್ಥಾನವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕೆಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಯುವಜನ ಸೇವೆ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ಧಲಿಂಗ ಪಾಟೀಲ, ಶರಣು ಸಲಗರ, ಎಂಎಲ್ಸಿಗಳಾದ ಭೀಮರಾವ ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಓ ಡಾ.ಗಿರೀಶ ಬದೋಲೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಪ್ರತಿ ಟನ್ ಕಬ್ಬಿಗೆ 2700 ರು. ಪಾವತಿಸಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಬೀದರ್‌: ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಯವರು ರೈತರು ಸರಬರಾಜು ಮಾಡಿದ ಪ್ರತಿ ಟನ್ ಕಬ್ಬಿಗೆ ಶೀಘ್ರವೇ 2700 ಹಣ ಪಾವತಿಸಬೇಕು ಇಗಾಗಲೇ ಕೆಲ ಕಾರ್ಖಾನೆಯವರು ನವೆಂಬರ್ ತಿಂಗಳದ್ದು 2,600 ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ಬಾಕಿ ಹಣ ಪಾವತಿಗೆ ಮುಂದಾಗಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದರು.ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದ ಬೀದರ್ ಎಟಿಎಂ ದರೋಡೆ ಹಾಗೂ ವ್ಯಾನ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು, ಇನ್ನೊರ್ವ ಸಿಬ್ಬಂದಿ ಗಾಯಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎರಡು ಕುಟುಂಬದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಹಾಗೂ ಉದ್ಯೋಗ ನೀಡಬೇಕೆಂದು ಶಾಸಕರು ಸಚಿವರಿಗೆ ಒತ್ತಾಯಿಸಿದರು.

ಸರ್ಕಾರಿ ಶಾಲಾ ವಿದ್ಯಾರ್ಥಿಗಳ 10 ನೇ ತರಗತಿ ಫಲಿತಾಂಶ ಹೆಚ್ಚಳಕ್ಕಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ ನಡೆಸಿ ಮಾಹಿತಿ ಪಡೆಯುವುದು ಅಗತ್ಯವಾಗಿದೆ ಎಂದರು. ಇದಕ್ಕೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳ ಸಂಪರ್ಕದಲ್ಲಿದ್ದು ಪ್ರತಿಯೊಂದು ಯೋಜನೆ ಕುರಿತು ಮಾಹಿತಿ ನೀಡಬೇಕೆಂದರು.

-

‘ಹುಮನಾಬಾದ್ ನಗರಸಭೆ ಮಾಡಿ ಮೇಲ್ದರ್ಜೆಗೇರಿಸಿ’

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲರು ಮಾತನಾಡಿ,ರಾಜೇಶ್ವರ ಗ್ರಾಮ ಪಂಚಾಯತಿಯಿಂದ ಪುರಸಭೆಗೆ ಮೆಲ್ದರ್ಜೆಗೆರಿಸಿ ಹಾಗೂ ಹುಮನಾಬಾದ್‌ ಪುರಸಭೆಯನ್ನು ನಗರಸಭೆಗೆರಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

Share this article