ಪ್ರಶ್ನೆ ಮಾಡುವ ಮನೋಧರ್ಮ ರೂಪಿಸಿಕೊಳ್ಳಿ: ಎಂ.ವಿ.ಕೃಷ್ಣ

KannadaprabhaNewsNetwork | Published : Jul 1, 2025 12:47 AM

ವೈಜ್ಞಾನಿಕ ನೆಲೆಯಲ್ಲಿ ಸ್ವಸಹಾಯ ಗುಂಪುಗಳು ರೂಪಗೊಂಡು ಅನುತ್ಪಾದಕ ಚಟುವಟಿಕೆಗಳಿಗೆ ಸಂಪನ್ಮೂಲ ಬಳಕೆ ಆಗುವುದನ್ನು ತಡೆಗಟ್ಟಿ, ವೃತ್ತಿ ಆಧಾರಿತ ಉತ್ಪನ್ನದಾಯಕ ಚಟುವಟಿಕೆಗಳಿಗೆ ಕಿರು ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯ ಪೂರೈಕೆ ಆಗುವಂತೆ ಆಗಬೇಕು. ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಮನೋಧರ್ಮ ರೂಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಹಿಳಾ ಸ್ವಸಹಾಯ ಗುಂಪುಗಳ ಲೇವಾದೇವಿ ಸಂಘಗಳಾಗಿ ಮಾರ್ಪಟ್ಟು, ಸ್ಥಾಪಿತ ಉದ್ದೇಶಕ್ಕೆ ವಿಮುಖವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಳವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಕಳವಳ ವ್ಯಕ್ತಪಡಿಸಿದರು.

ಭಾರತೀ ಕಾಲೇಜು ಅರ್ಥಶಾಸ್ತ್ರ ವಿಭಾಗ, ಭಾರತೀ ಸ್ನಾತಕ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಭಾರತಿ ಪದವಿ ಪೂರ್ವ ಕಾಲೇಜು ಮತ್ತು ಐಕ್ಯೂ ಎಸಿ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮಹಿಳಾ ಸಬಲೀಕರಣದ ಮೇಲೆ ಕಿರುಬಂಡವಾಳ ವಿಷಯವಾಗಿ ಮಾತನಾಡಿದರು.

ವೈಜ್ಞಾನಿಕ ನೆಲೆಯಲ್ಲಿ ಸ್ವಸಹಾಯ ಗುಂಪುಗಳು ರೂಪಗೊಂಡು ಅನುತ್ಪಾದಕ ಚಟುವಟಿಕೆಗಳಿಗೆ ಸಂಪನ್ಮೂಲ ಬಳಕೆ ಆಗುವುದನ್ನು ತಡೆಗಟ್ಟಿ, ವೃತ್ತಿ ಆಧಾರಿತ ಉತ್ಪನ್ನದಾಯಕ ಚಟುವಟಿಕೆಗಳಿಗೆ ಕಿರು ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯ ಪೂರೈಕೆ ಆಗುವಂತೆ ಆಗಬೇಕು. ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಮನೋಧರ್ಮ ರೂಪಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಎಂ.ನಾಗರಾಜೇಗೌಡ ಮಾತನಾಡಿ, ಮಹಿಳಾ ಸಬಲೀಕರಣದ ಪ್ರಯೋಜನಗಳು ಸ್ವಸಹಾಯ

ಗುಂಪುಗಳಿಗೆ ಲಭ್ಯವಾಗಬೇಕಾದರೆ ಪ್ರತಿಯೊಬ್ಬ ಮಹಿಳೆಯರು ಆರ್ಥಿಕ ಸಾಕ್ಷರತೆ ಹೊಂದಬೇಕು. ಆತ್ಮ ಸಮಾಲೋಚನೆಯ ಮೂಲಕ ಮಹಿಳಾ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಬೇಕು. ಕಿರು ಹಣಕಾಸು ಸಂಸ್ಥೆಗಳ ದುಬಾರಿ ಬಡ್ಡಿ ದರದ ಮೋಸದ ಜಾಲಕ್ಕೆ ಮಹಿಳಾ ಸ್ವಸಹಾಯ ಗುಂಪುಗಳು ಬಲಿಯಾಗಬಾರದು ಎಂದರು.

ಬ್ಯಾಂಕ್‌ಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಲಭ್ಯವಾಗುವ ಆಧಾರರಹಿತ ಸಾಲದ ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕರು ಮತ್ತು ಡೀನ್ ಪ್ರೊ.ಎಸ್.ನಾಗರಾಜ, ಅರ್ಥಶಾಸ್ತ ವಿಭಾಗದ ನಿವೃತ್ತ ಮುಖ್ಯಸ್ಥ ಎಂ. ಪುಟ್ಟಸ್ವಾಮಿಗೌಡ, ಐಕ್ಯೂಎಸಿ ಸಂಯೋಜಕರಾದ ಡಾ.ಎಂ.ಪಿ. ತೇಜೇಶ್ ಕುಮಾರ್, ಎ.ಎಸ್. ಸಂಜೀವ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ್,

ಸಂಚಾಲಕರಾದ ಎಚ್.ಕೆ.ದೊಡ್ಡಯ್ಯ, ಹನುಮಂತೇಗೌಡ, ಎ.ಎಸ್.ಪ್ರಶಾಂತಿನಿ, ಎಸ್.

ಚಂದ್ರಶೇಖರ್ ಹಾಗೂ ಅಧ್ಯಾಪಕರ ಮತ್ತು ಅಧ್ಯಾಪಕೇತರರು ಇದ್ದರು.