ಕಪ್ಪತ್ತಗುಡ್ಡದ ಮಣ್ಣಿನಲ್ಲಿ ಬೆಳೆದ ಔಷಧ ಸಸ್ಯಗಳಿಗೆ ಹೆಚ್ಚಿನ ಮಹತ್ವ

KannadaprabhaNewsNetwork |  
Published : Jul 01, 2025, 12:47 AM IST
ಮುಂಡರಗಿ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ನಡೆದ ಮಾಸಿಕ ಶರಣರ ಚಿಂತನ ಕಾರ್ಯಕ್ರಮವನ್ನು ಕೃಷಿ ಪಂಡಿತ ಈಶ್ವರಪ್ಪ ಹಂಚಿನಾಳ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡದಲ್ಲಿ ಔಷಧ ಗುಣಗಳಿರುವ ನೂರಾರು ಸಸ್ಯಗಳಿವೆ. ಇಲ್ಲಿನ ಮಣ್ಣಿನಲ್ಲಿ ಬೆಳೆದ ಔಷಧ ಸಸ್ಯಗಳಿಗೆ ಹೆಚ್ಚಿನ ಮಹತ್ವ ಇದೆ ಎಂದು ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಈಶ್ವರಪ್ಪ ಹಂಚಿನಾಳ ಹೇಳಿದರು.

ಮುಂಡರಗಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತ್ತಗುಡ್ಡದಲ್ಲಿ ಔಷಧ ಗುಣಗಳಿರುವ ನೂರಾರು ಸಸ್ಯಗಳಿವೆ. ಇಲ್ಲಿನ ಮಣ್ಣಿನಲ್ಲಿ ಬೆಳೆದ ಔಷಧ ಸಸ್ಯಗಳಿಗೆ ಹೆಚ್ಚಿನ ಮಹತ್ವ ಇದೆ ಎಂದು ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಈಶ್ವರಪ್ಪ ಹಂಚಿನಾಳ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಜರುಗಿದ ಮಾಸಿಕ ಶರಣರ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಜಮೀನುಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತ ಜಾಗ ಇರುವಲ್ಲಿ ಎಲ್ಲರೂ ಹೆಚ್ಚು ಹೆಚ್ಚು ಪ್ರಾಣವಾಯು ನೀಡುವ ಗಿಡ-ಮರಗಳನ್ನು ಬೆಳೆಸಬೇಕು. ಕಪ್ಪತ್ತಗುಡ್ಡದ ಉಳಿವಿನ ಕುರಿತು ಹಾಗೂ ಅರಣ್ಯದ ಕುರಿತು ಎಲ್ಲರೂ ಕಾಳಜಿ ವಹಿಸಬೇಕು ಎಂದರು.

ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಕಪ್ಪತ್ತಗುಡ್ಡದ ವೈವಿಧ್ಯತೆ ಕುರಿತು ಮಾತನಾಡಿ, ಕಪ್ಪತ್ತಗುಡ್ಡದ ಕುರಿತು ಅನೇಕರಿಗೆ ಸಂಪೂರ್ಣ ಮಾಹಿತಿ ಇಲ್ಲ. ತಾಲೂಕಿನ ಸಿಂಗಟಾಲೂರಿನಿಂದ ಗದಗ ತಾಲೂಕಿನ ಬಿಂಕದಕಟ್ಟಿ ವರೆಗೂ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿದೆ. ಗದುಗಿನ ತೋಂಟದ ಶ್ರೀಗಳು ಹಾಗೂ ಇತರ ಸ್ವಾಮೀಜಿಗಳು, ಪರಿಸರವಾದಿಗಳ ಹೋರಾಟದ ಫಲವಾಗಿ 2019ರಲ್ಲಿ ವನ್ಯಜೀವಿ ಧಾಮ ಎಂದು ಘೋಷಣೆಯಾಗಿದೆ. ಈ ಗುಡ್ಡದಲ್ಲಿ ಹೈನಾ, ತೋಳ, ಜಿಂಕೆ, ಚಿರತೆ, ಕಾಡುಹಂದಿ ಸೇರಿ ಅನೇಕ ಪ್ರಾಣಿಗಳು ಹಾಗೂ ವೈವಿಧ್ಯಮಯ ಪಕ್ಷಿಗಳು ಇವೆ. ಅವುಗಳು ರಕ್ಷಣೆಯಾದರೆ ಕಪ್ಪತ್ತಗುಡ್ಡ ಸದಾ ಸಂರಕ್ಷಣೆಯಾಗಿರುತ್ತದೆ. ಕಪ್ಪತ್ತಗುಡ್ಡದಿಂದಾಗಿ ಶುದ್ಧ ಗಾಳಿ ದೊರೆಯುತ್ತಿದ್ದು, ಈ ಗುಡ್ಡವನ್ನು ಕಪೋತಗಿರಿ, ದ್ರೋಣಗಿರಿ, ಸುವರ್ಣಗಿರಿ ಎಂದು ವಿಭಜಿಸಲಾಗಿದೆ. ಮಕ್ಕಳಿಗೆ ತೋರಿಸಿ ಅದರ ಮಹತ್ವ ತಿಳಿಸಿ, ಎಲ್ಲರೂ ಸೇರಿ ಕಪ್ಪತ್ತಗುಡ್ಡ ಉಳಿಸುವ ಪ್ರತಿಜ್ಞೆ ಮಾಡೋಣ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಕಪ್ಪತ್ತಗುಡ್ಡದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಪ್ಪತ್ತಗುಡ್ಡದಲ್ಲಿ ಹಲವು ಬಗೆಯ ಔಷಧ ಸಸ್ಯಗಳಿದ್ದರೂ ನಾವು ಅದನ್ನು ಬಳಸಿಕೊಳ್ಳದೇ ಅಲೋಪತಿ ಔಷಧ ಮೊರೆ ಹೋಗುತ್ತಿದ್ದೇವೆ ಎಂದರು.

ತಾಲೂಕು ಅಧ್ಯಕ್ಷ ಎ.ವೈ. ನವಲಗುಂದ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಪಾಟೀಲ, ಎಸ್.ಎಸ್. ಗಡ್ಡದ, ಕೊಟ್ರೇಶ‌ ಅಂಗಡಿ, ಪಾಲಾಕ್ಷಿ ಗಣದಿನ್ನಿ, ಮಂಜುನಾಥ ಇಟಗಿ, ಬಸವಂತಪ್ಪ ಮುದ್ದಿ, ವೆಂಕಟೇಶ ಗುಗ್ಗರಿ, ದೇವರಡ್ಡಿ ಇಮ್ರಾಪುರ, ಪಿ.ಎಸ್. ನಾಯಕ, ಬಸಯ್ಯ‌ ಗಿಂಡಿಮಠ, ಕೆ.ಕೆ‌. ಬಿಳಿಮಗ್ಗದ ಉಪಸ್ಥಿತರಿದ್ದರು. ಪತ್ರಕರ್ತ ಸಿ.ಕೆ. ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ರಾಮೇನಹಳ್ಳಿ ಸ್ವಾಗತಿದರು. ಕೊಟ್ರೇಶ ಕಟಗಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌