ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

KannadaprabhaNewsNetwork |  
Published : Dec 20, 2025, 01:00 AM IST
ಸಿಕೆಬಿ-2 ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಸೈನ್ಸ್ ಅಕಾಡೆಮಿ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ನಡೆದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ 28 ನೇ ರಾಜ್ಯಮಟ್ಟದ ವಿಜ್ಞಾನೋತ್ಸವ-2025ಕ್ಕೆ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಚಾಲನೆ ನೀಡಿದರು | Kannada Prabha

ಸಾರಾಂಶ

ವಿದ್ಯಾರ್ಥಿಗಳು ಯಾವುದೇ ಹೊಸ ವಿಷಯ ಕುರಿತು ಪ್ರಶ್ನಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಿ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ವಿಜ್ಞಾನಿ ಮತ್ತು ಧರ್ಮಗುರುಗಳು ಸದಾ ಮೌನಿಯಾಗಿದ್ದುಕೊಂಡೇ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಮೌನಕ್ಕೆ ತನ್ನದೇ ಆದ ಮಹತ್ವವಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖ. ವಿಜ್ಞಾನದ ಸಂಶೋಧನೆಗಳು ಮನುಕುಲದ ಅಗತ್ಯಗಳನ್ನು ಪೂರೈಸಲು ಶ್ರಮಿಸಿದರೆ, ಆಧ್ಯಾತ್ಮ ಅಂತರಂಗವನ್ನು ಬೆಳಗಲಿದೆ ಎಂದು ಶ್ರೀಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಸೈನ್ಸ್ ಅಕಾಡೆಮಿ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ 28 ನೇ ರಾಜ್ಯಮಟ್ಟದ ವಿಜ್ಞಾನೋತ್ಸವ-2025ಕ್ಕೆ ಚಾಲನೆ ನೀಡಿ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇವಲ ಕಲಿಕೆಗೆ ಮಾತ್ರ ಒತ್ತು ನೀಡುವುದಿಲ್ಲ. ಬದಲಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆಧ್ಯತೆ ನೀಡಲಾಗುತ್ತದೆ ಎಂದರು.

ವಿಜ್ಞಾನ ಸರಿಯಾಗಿ ಅರ್ಥಮಾಡಿಕೊಳ್ಳಿ

ಕಳೆದ ಹಲವು ವರ್ಷಗಳಿಂದ ವಿಜ್ಞಾತಂ ಎಂಬ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಅಗತ್ಯ. ಮಕ್ಕಳು ಭಯಮುಕ್ತ ವಾತಾವರಣ ಸೃಷ್ಟಿಸಿಕೊಂಡು ವಿಜ್ಞಾನದ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ವಿಜ್ಞಾನ ಪ್ರದರ್ಶನ ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಯಾವುದೇ ಹೊಸ ವಿಷಯ ಕುರಿತು ಪ್ರಶ್ನಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಿ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ವಿಜ್ಞಾನಿ ಮತ್ತು ಧರ್ಮಗುರುಗಳು ಸದಾ ಮೌನಿಯಾಗಿದ್ದುಕೊಂಡೇ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಮೌನಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಮಿಷನ್ ಗಗನಯಾನ 2027

ಇಸ್ರೋದ ಪ್ರಖ್ಯಾತ ವಿಜ್ಞಾನಿ ಡಾ. ರಾಮನಗೌಡ ವಿ. ನಾಡಗೌಡ ಮಾತನಾಡಿ, ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆಯನ್ನು ದಾಖಲಿಸಿರುವ ಸಂಸ್ಥೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2040ರ ವೇಳೆಗೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಗುರಿಯನ್ನು ಹೊಂದಿದೆ. ಭಾತರದ ಮೊದಲ ಮಾನವ ಸಹಿತ ನೌಕೆ ಮಿಷನ್ ಗಗನಯಾನ 2027ರಲ್ಲಿ ಉಡಾವಣೆಗೆ ಸಿದ್ಧತೆಗಳು ನಡೆದಿವೆ.ಚಂದ್ರನ ಮೇಲೆ ನೀರಿನ ಆವಿಷ್ಕಾರದಿಂದ ಹಿಡಿದು ಚಂದ್ರಯಾನ-3 ಮಿಷನ್ ಮೂಲಕ ಚಂದ್ರನ ದಕ್ಷಿಣ ದ್ರುವದ ಬಳಿ ಮೊದಲ ಸಾಫ್ಟ್ ಲ್ಯಾಂಡಿಂಗ್‌ವರೆಗೆ ಇಸ್ರೋ ಸಾಧನೆಗಳು ಸೇರಿವೆ ಎಂದರು.ಎಐ ತಂತ್ರಜ್ಞಾನ, ರೋಬೋಟಿಕ್ ತಂತ್ರಜ್ಞಾನ ಮತ್ತು ಬಿಗ್ ಡೇಟಾ ತಂತ್ರಜ್ಞಾನಗಳು ಬಾಹ್ಯಾಕಾಶ ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗುತ್ತಿವೆ. 35 ವರ್ಷಗಳ ಹಿಂದೆ ಕಂಪ್ಯೂಟರ್ ಕ್ರಾಂತಿಯನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಇದೇ ರೀತಿ ಕೃತಕ ಬುದ್ದಿಮತ್ತೆ ಮತ್ತು ರೋಬೊಟಿಕ್ಸ್ ಭವಿಷ್ಯದ ಬಾಹ್ಯಾಕಾಶ ಯುಗವನ್ನು ವ್ಯಾಖ್ಯಾನಿಸುತ್ತವೆ,ಈ ದಿಕ್ಕಿನಲ್ಲಿ ಭಾರತವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಚಂದ್ರಯಾನ-1ರೊಂದಿಗೆ ಆರಂಭವಾದ ಇಸ್ರೋ ಸಾಧನೆ ಚಂದ್ರನ ದಕ್ಷಿಣ ಧೃವದ ಮೇಲೆ ಮೊದಲ ಸಾಪ್ಟ್ ಲ್ಯಾಂಡಿಂಗ್‌ವರೆಗೆ ಭಾರತವು ಬಾಹ್ಯಾಕಾಶದಲ್ಲಿ ಹಲವಾರು ವಿಶ್ವದಾಖಲೆಗಳನ್ನು ಸ್ಥಾಪಿಸಿದೆ ಎಂದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ

ಆದಿಚುಂಚನಗಿರಿ ಶ್ರೀಮಠವು ಅನ್ನ, ಅಕ್ಷರ, ಆರೋ ಗ್ಯ, ಆಧ್ಯಾತ್ಮಿಕತೆ, ಆನಂದ ದಾಸೋಹ ಸೇವೆಗಳಿಗೆ ದಾರಿದೀಪವಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳಸುವ ಉದ್ದೇಶದಿಂದ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ಎನ್. ಶ್ರೀಧರ, ಸಿಇಓ ಡಾ. ಎನ್. ಶಿವರಾಮ್ ರೆಡ್ಡಿ, ಬಿಜಿಎಸ್ ಪಿ. ಯು ಕಾಲೇಜಿನ ಡೀನ್ ಡಾ.ಎನ್.ಮಧುಸೂಧನ್ , ಪ್ರಾಂಶುಪಾಲ ಹೆಚ್.ಬಿ ರಮೇಶ್, ಬಿಜಿಎಸ್ ಇಂಗ್ಲಿಷ್ ಸ್ಕೂಲ್ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ