- 69ನೇ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನವಿ ।
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ, ಕಾವೇರಿಯಿಂದ ಗೋದಾವರಿವರೆಗೆ ಹರಡಿದ್ದ ಕನ್ನಡವು ಶ್ರೀಮಂತ ಸಂಸ್ಕೃತಿಯ ಭಾಷೆಯಾಗಿದೆ ಎಂದು ಗಣಿ ಮತ್ತು ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಾಮ್ರಾಟ ಅಶೋಕ ಹಾಗೂ ಶಾತವಾಹನರ ಆಳ್ವಿಕೆಯಲ್ಲೂ ಕನ್ನಡ ಭಾಷೆ ಬಳಕೆ ಕಾಣಬಹುದು ಎಂದರು.
ಐದು ದಶಕಗಳಲ್ಲಿ ರಾಜ್ಯದ ಬೆಳವಣಿಗೆ ಅವಲೋಕಿಸಿದರೆ ಆಡಳಿತ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಅಂತರ ರಾಷ್ಟ್ರೀಯ ಮನ್ನಣೆ ಕರ್ನಾಟಕ ಪಡೆದಿದೆ ಎಂದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಪುಣ್ಯಭೂಮಿ ನಮ್ಮದು. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಬಣ್ಣಿಸಿದ್ದಾರೆ. ಇಂತಹ ಸರ್ವ ಜನಾಂಗದ ಅಭಿವೃದ್ಧಿಗೂ ತಮ್ಮ ಸರ್ಕಾರ ಆದ್ಯತೆ ನೀಡಿದೆ. ರಾಜ್ಯೋತ್ಸವವು ಸಮಸ್ತ ಕನ್ನಡಿಗರ ಹಬ್ಬ, ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವ ಎಂದು ಅವರು ತಿಳಿಸಿದರು.
ಕರ್ನಾಟಕವೆಂದು ನಾಮಕರಣಗೊಂಡ ಸುವರ್ಣ ಸಂಭ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುತ್ತಿದೆ. ದಾವಣಗೆರೆ ನಗರದ ಗಾಜಿನ ಮನೆಯ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರ, ಜಿಲ್ಲೆಯ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನವೆಂಬರ್ ತಿಂಗಳಿಡೀ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ಎಸ್.ಎಸ್.ಮಲ್ಲಿಕಾರ್ಜುನ ಮನವಿ ಮಾಡಿದರು.
- - -
- - -
ನಿಜಲಿಂಗಪ್ಪ ಬಡಾವಣೆಯ ಶ್ರೀನಾಥ ಪಿ. ಅಗಡಿ ಛಾಯಾಗ್ರಹಣ, ಜಾಲಿ ನಗರದ ಎಸ್.ಪಿ. ಲಾವಣ್ಯ ಶ್ರೀಧರ್ ಯೋಗ, ಜಗಳೂರಿನ ಬಡಪ್ಪ ಬಯಲಾಟ, ಯಲ್ಲಮ್ಮ ನಗರದ ವಿನಾಯಕ ನಾಕೋಡ, ಎಸ್.ಎಂ. ಕೃಷ್ಣ ನಗರದ ಕೆ.ಎಸ್.ಕೊಟ್ರೇಶ್ ರಂಗಭೂಮಿ ಕ್ಷೇತ್ರ, ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಗ್ರಾಮದ ಎಸ್.ವಿ. ವಿಶ್ವನಾಥ ಬಯಲಾಟ, ದೊಡ್ಡಾಟ, ನಿಜಲಿಂಗಪ್ಪ ಬಡಾವಣೆಯ ಎ.ಜೆ.ರವಿಕುಮಾರ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಸಮಾಜ ಸೇವೆಗಾಗಿ ಸನ್ಮಾನಿತರಾದರು.
ಮಲೇಬೆನ್ನೂರಿನ ಕನ್ನಡಪ್ರಭ ವರದಿಗಾರ ಸದಾನಂದ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ, ಪಬ್ಲಿಕ್ ಟೀವಿ ಕ್ಯಾಮೆರಾಮನ್ ಎಚ್.ಟಿ. ಪರಶುರಾಮ, ಜನತಾವಾಣಿ ಹಿರಿಯ ವರದಿಗಾರ ಒ.ಎನ್. ಸಿದ್ದಯ್ಯ ಒಡೆಯರ್, ಆಕಾಶವಾಣಿಯ ಕೆ.ಎಸ್ ಚನ್ನಬಸಪ್ಪ (ಶಂಭು), ಪತ್ರಿಕಾ ವಿತರಕ ಎಂ.ಎಸ್. ಮಂಜುನಾಥ ಅವರನ್ನು ಮಾಧ್ಯಮ ಕ್ಷೇತ್ರದ ಸೇವೆಗಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಗೌರವಿಸಿದರು.ವಿನೋಬ ನಗರದ ಸಂತೋಷ ದೊಡ್ಮನಿ, ಬಿ.ಎಸ್. ಶುಭಮಂಗಳ, ನಾಗರಾಜ ಜಮ್ನಳ್ಳಿ, ಚನ್ನಗಿರಿ ಎಲ್.ಜಿ. ಮಧುಕುಮಾರರನ್ನು ಕನ್ನಡಪರ ಹೋರಾಟಕ್ಕಾಗಿ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ ಸಾಹಿತ್ಯ ಕ್ಷೇತ್ರ, ಕುಕ್ಕವಾಡ ಗ್ರಾಮದ ಕೆ.ಟಿ. ಚಂದ್ರಶೇಖರಪ್ಪ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು.
- - - ಬಾಕ್ಸ್-3 * ತಾಯಿ ಭುವನೇಶ್ವರಿ ಮೆರವಣಿಗೆರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಕನ್ನಡತಾಯಿ ಶ್ರೀ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಮೆರವಣಿಗೆಯು ಕಲಾತಂಡಗಳೊಂದಿಗೆ ಸಮಾರಂಭ ಸ್ಥಳವಾದ ಜಿಲ್ಲಾ ಕ್ರೀಡಾಂಗಣವನ್ನು ತಲುಪಿತು.ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ, ನಿಜಲಿಂಗಪ್ಪ ಬಡಾವಣೆ ಗುರುಕುಲ ಪಬ್ಲಿಕ್ ಶಾಲೆ, ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೊಡಗನೂರು ನಾಗರಾಜ್ ಅವರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗೆ ಹೆಜ್ಜೆ ಹಾಕಿದರು.
- - -ಬಾಕ್ಸ್-4* ಪಥಸಂಚಲನ: ಪ್ರಶಸ್ತಿ ಪುರಸ್ಕೃತ ತಂಡಗಳು
ದಾವಣಗೆರೆ: ರಾಜ್ಯೋತ್ಸವ ಅಂಗವಾಗಿ ಪಥ ಸಂಚಲನ ನಡೆದಿದ್ದು, ವಿವಿಧ ತಂಡಗಳು ಪ್ರಶಸ್ತಿಗೆ ಭಾಜನವಾಗಿವೆ.ಡಿಎಆರ್.ತಂಡ ಪ್ರಥಮ, ಗೃಹರಕ್ಷಕ ದಳ ದ್ವಿತೀಯ, ನಗರ ಉಪ ವಿಭಾಗದ ಪೊಲೀಸ್ ತಂಡ ತೃತೀಯ, ಎನ್‌ಸಿಸಿ ತಂಡದ ವಿಭಾಗದಿಂದ ಎ.ಆರ್.ಜಿ, ಕಾಲೇಜು ತಂಡ ಪ್ರಥಮ, ಜಿಎಫ್‍ಜಿಸಿ ಕಾಲೇಜು ದ್ವಿತೀಯ, ಎ.ವಿ.ಕೆ. ಮಹಿಳಾ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು. ಹೈಸ್ಕೂಲ್ ತಂಡಗಳ ವಿಭಾಗದಲ್ಲಿ ಭಾರತ ಸೇವಾದಳ ಪ್ರಥಮ, ಸೆಂಟ್ ಜಾನ್ಸ್ ಹೈಸ್ಕೂಲ್ ಬಾಲಕಿಯರು ದ್ವಿತೀಯ ಸರ್ಕಾರಿ ಬಾಲಕರ ಹೈಸ್ಕೂಲ್ ತಂಡ ತೃತೀಯ ಸ್ಥಾನ ಪಡೆದಿದೆ.ಪ್ರೈಮರಿ ತಂಡಗಳ ವಿಭಾಗದಲ್ಲಿ ಪ್ರಥಮ ಸಿದ್ದಗಂಗಾ ಪ್ರಾಥಮಿಕ ಶಾಲೆ, ಮತ್ತು ವಿಶೇಷ ತಂಡ ಪ್ರಥಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಡಿಸ್ಟ್ರಿಕ್ ಟ್ರೂಪ್ ಗರ್ಲ್ಸ್ ತಂಡ ಮತ್ತು ಜಿಲ್ಲಾ ಪೊಲೀಸ್ ವಾದ್ಯವೃಂದ ತಂಡಗಳು ಬಹುಮಾನ ಪಡೆದವು. ಸಾಂಸ್ಕೃತಿಕ ನೃತ್ಯ: ಪ್ರಥಮ ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ದ್ವಿತೀಯ ಶಾಮನೂರು ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆ, ತೃತೀಯ ನಗರದ ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ ಬಹುಮಾನ ಪಡೆದವು.
ಹಲ್ಮಿಡಿ ಶಾಸನ ಸ್ಥಾಪನೆ; ಮೊಟ್ಟ ಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ವೇಳೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿ ನೆರವೇರಿಸಿದರು.- - -