ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಬಿಜೆಪಿ ಉಪಚುನಾವಣೆಗೆ ಅಸ್ತ್ರವಾಗಿ ಬಳಸಿ ಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ದೂರಿದರು.ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಂತರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೈತರ ಭೂಮಿಗೆ ವಕ್ಫ್ ನೋಟಿಸ್ ನೀಡಿದೆ ಎನ್ನುವುದನ್ನು ಬಿಜೆಪಿಗರು ಚುನಾವಣೆಯ ಇಸುವಾಗಿ ಮಾಡುತ್ತಿದ್ದಾರೆ. ನೋಟಿಸ್ ನೀಡುವ ಕಾರ್ಯವು ಹಿಂದಿನ ಸರ್ಕಾರದಲ್ಲಿಯೂ ಆಗಿದೆ. ಕೆಲವು ಕೋರ್ಟ್ ಆದೇಶದಂತೆ, ಇನ್ನೂ ಕೆಲವು ಸ್ಥಳೀಯ ಮಟ್ಟದ ಅಧಿಕಾರಿಗಳು ತೆಗೆದುಕೊಂಡ ತೀರ್ಮಾನಗಳಿಂದ ಆಗಿರುತ್ತವೆ. ಅದಕ್ಕಾಗಿ ಅವುಗಳು ಸರ್ಕಾರದ ಗಮನಕ್ಕೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ರಾಜ್ಯ ಸರ್ಕಾರವು ಈ ಕುರಿತು ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಈ ವಿಚಾರವಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೆಕೆಆರ್‌ಡಿಬಿ ಮ್ಯಾಕ್ರೋ ಅನುದಾನವನ್ನು ಜಯದೇವ ಆಸ್ಪತ್ರೆಗೆ ಬಳಸುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಪ್ರತಿ ವಿಭಾಗಕ್ಕೆ ಒಂದರಂತೆ ಜಯದೇವ ಆಸ್ಪತ್ರೆ ಯನ್ನು ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಯಿದ್ದು, ಆರಂಭದಿಂದಲೂ ಕೆಕೆಆರ್‌ಡಿಬಿ ಅನುದಾನವನ್ನೇ ಬಳಸುತ್ತಾ ಬರಲಾಗಿದೆ. ಈ ಭಾಗದ ಎಲ್ಲ ಜಿಲ್ಲೆಗಳಿಗೆ ಸಮವಾಗಿ ನಿಯಮಾನುಸಾರವೇ ಕೆಕೆಆರ್‌ಡಿಬಿಯ ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದರು.ಇನ್ನು,ಗಡಿನಾಡಿನ ಕನ್ನಡ ಶಾಲೆಯ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಸೇರಿ ಇತರೆ ಸಮಸ್ಯೆಗಳ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರು ಹಾಗೂ ಕನ್ನಡ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನಕ್ಕೆ ಒಂದೊಂದು ಇಲಾಖೆಯನ್ನು ಸ್ಥಳಾಂತರಿಸಿದ ಬಳಿಕ ಉದ್ಘಾಟನೆ ಮಾಡಲಾಗುವುದು. 2000 ಜನರ ಸಾಮರ್ಥ್ಯದ ರಂಗಮಂದಿರ ನಿರ್ಮಾಣಕ್ಕೆ 5 ಎಕರೆ ಜಾಗದ ಅಗತ್ಯವಿದ್ದು, ಜಿಲ್ಲಾಡಳಿತದಿಂದ ಗುರುತಿಸಲಾಗುತ್ತಿದೆ. ಹಾಗೆಯೇ ಒಪೆಕ್ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿ ಸಲು ಅಗತ್ಯ ಕ್ರಮ ವಹಿಸಿದ್ದು, ವೈದ್ಯರು ಸಂಜೆವರೆಗೂ ಆಸ್ಪತ್ರೆಯಲ್ಲಿಯೇ ಇರುವಂತೆ ನಿಗಾ ವಹಿಸಲಾಗುತ್ತಿದೆ. ಯಾರೇ ನಿರ್ಲಕ್ಷ್ಯ ತೋರಿದರು ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ವಿಮಾನ ನಿಲ್ದಾಣ ಕಾಮಗಾರಿ ಪರವಾನಗಿಗೆ ಮನವಿ: ಸಚಿವರಾಯಚೂರು ನಗರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಪರವಾನಗಿ ನೀಡಬೇಕು ಎಂದು ಕೇಂದ್ರಕ್ಕೆ ಕೋರಿದ್ದು, ಅವರಿಂದ ಸೂಕ್ತ ಸ್ಪಂದನೆ ಲಭಿಸಿದ್ದು, ಇದರ ಜೊತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಏಮ್ಸ್ ಮಂಜೂರು ವಿಚಾರವಾಗಿ ರಾಜ್ಯ ಸರ್ಕಾರ ಆರಂಭದಿಂದಲೂ ಬದ್ಧತೆ ಪ್ರದರ್ಶಿಸುತ್ತಿದ್ದು, ಆ ನಿಟ್ಟಿನಲ್ಲಿಯೇ ಜಾಗವನ್ನು ಸಹ ಗುರುತಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಹೇಳಿದರು.