ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕನ್ನಡನಾಡು, ನುಡಿಯ ಸೇವೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಕೊಡುಗೆ ಅಪಾರವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅಭಿಪ್ರಾಯಪಟ್ಟರು.ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ೧೭ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ೧೯೫೬ರ ನ.೧ರಂದು ಮೈಸೂರು ರಾಜ್ಯವಾಗಿ ನಂತರ ಕರ್ನಾಟಕವಾಗಿ ಮಾಡಲು ಹಲವು ಹಿರಿಯರು, ಕವಿಗಳು, ಸಾಹಿತಿಗಳು ಶ್ರಮಪಟ್ಟಿದ್ದಾರೆ. ಅವರೆಲ್ಲರ ಶ್ರಮದ ಫಲವಾಗಿ ಇಂದು ಸುಂದರವಾದ ಕನ್ನಡ ನಾಡು ರೂಪಿತವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡನಾಡಿಗೆ ವಿಶ್ವದಲ್ಲೇ ಅತ್ಯುತ್ತಮವಾದ ಹೆಸರಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಬಿ.ಜೆ.ದೀಪಕ್ ಮಾತನಾಡಿ, ಹಿಂದೆ ದಕ್ಷಿಣ ಭಾರತದಲ್ಲಿ ಮದ್ರಾಸು, ಹೈದರಾಬಾದ್, ಮುಂಬೈ, ಮೈಸೂರು, ಕೊಡಗು ಸೇರಿದಂತೆ ಐದು ಸ್ವತಂತ್ರ ಸಂಸ್ಥಾನಗಳಿದ್ದವು. ಅಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಮೈಸೂರು ರಾಜರ ಒತ್ತಾಸೆಯಿಂದ ಇಡೀ ದೇಶದಲ್ಲಿ ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಂಡ ಸಂಸ್ಥಾನವಾಗಿ ಮೈಸೂರು ಸೇರ್ಪಡೆಗೊಳ್ಳುವ ಮೂಲಕ ದೇಶಭಕ್ತಿಯನ್ನು ಮೆರೆದಿದ್ದು ಇತಿಹಾಸ ಎಂದು ಬಣ್ಣಿಸಿದರು.ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ೧೯೫೬ರ ವರೆಗೆ ಸ್ವತಂತ್ರ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು ಬೇಷರತ್ತಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ಹೀಗಾಗಿ ಕೊಡಗಿನ ಸಮಗ್ರ ಅಭಿವೃದ್ದಿಗೆ ಕರ್ನಾಟಕ ಸರ್ಕಾರ ಮುಂದಾಗಬೇಕು. ಅಲ್ಲದೇ ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಅಸಿತ್ವದಲ್ಲಿದ್ದ ಮೂರು ವಿಧಾನ ಸಭಾಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಸ್ಥಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಗಿಗೆ ನೀಡುವ ಮೂಲಕ ಈ ಹಿಂದೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ಉಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೊಜ, ಲೇಖಕಿ ಎಂ.ಎ. ರುಬಿನಾ, ಕರವೇ ಶಿವರಾಮೇಗೌಡ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ದಿವಾಕರ, ಕಿಬ್ಬೆಟ್ಟ ಮಂದಣ್ಣ, ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಏಂಜೆಲ್ ರಶ್ಮಿ ಡಿಸೋಜಾ, ಮಾಸ್ಟರ್ ಅನೂಪ್ ಅರ್ಪಿತ್ ಉಪಸ್ಥಿತರಿದ್ದರು.
ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.ಕಾರ್ಯಕ್ರಮಕ್ಕೂ ಮೊದಲು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕಕ್ಕೆಹೊಳೆಯ ಬಸವೇಶ್ವರ ದೇವಾಲಯದಿಂದ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಡೊಳ್ಳು ಕುಣಿತ, ಕಂಸಾಳೆಯೊಂದಿಗೆ ಆಟೋಗಳು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸಗಿ ಬಸ್‌ನಿಲ್ದಾಣಕ್ಕೆ ಬರಲಾಯಿತು. ಮಧ್ಯಾಹ್ನ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಸಹಕಾರದೊಂದಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿತು.