ಸರ್ಕಾರದ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿ: ವಾಮದೇವ ಶಿವಾಚಾರ್ಯ ಶ್ರೀ

KannadaprabhaNewsNetwork |  
Published : Jul 30, 2025, 12:48 AM IST
ಕುರುಗೋಡು ೦೧ ಪಟ್ಟಣದ ಸೋಮವಾರ ಜರುಗಿದ ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಪದಗ್ರಹಣ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ವಾಮದೇವ ಶಿವಾಚಾರ್ಯ ಶ್ರೀ ಮಾತನಾಡಿದರು | Kannada Prabha

ಸಾರಾಂಶ

ಅತ್ಯಂತ ಕಷ್ಟದಲ್ಲಿರುವ ಜನರ ಹೊಟ್ಟೆ ತುಂಬಿಸುವ ಸರ್ಕಾರ ಯಾವುದಾದರೂ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವಾಗಿದೆ.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ ಕುರುಗೋಡು

ಅತ್ಯಂತ ಕಷ್ಟದಲ್ಲಿರುವ ಜನರ ಹೊಟ್ಟೆ ತುಂಬಿಸುವ ಸರ್ಕಾರ ಯಾವುದಾದರೂ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದವರು ಸೋಮಾರಿಗಳಾಗದೆ ಅಭಿವೃದ್ಧಿ ಹೊಂದಲು ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಹಂಪಿ ಸಾವಿರ ದೇವರ ಮಹಂತರ ಮಠದ ವಾಮದೇವ ಶಿವಾಚಾರ್ಯ ಶ್ರೀ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜ್ಞಾನಿ, ಸುಜ್ಞಾನಿ, ಅಜ್ಞಾನಿ ಸೇರಿದಂತೆ ಭೂಮಿ ಎಲ್ಲರನ್ನು ಹೊತ್ತುಕೊಂಡಿದೆ. ಅದರಂತೆ ವಿಧಾನಸೌಧ ಮೇಲೆ ಬರೆದಿರುವಂತೆ ಸರ್ಕಾರಿ ಕೆಲಸ, ದೇವರ ಕೆಲಸವಾಗಬೇಕಾದರೆ ಸರ್ವರಿಗೂ ಯೋಜನೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದಾಗ ಸಾಧ್ಯ ಎಂದರು.

ಗ್ರಾಮದಲ್ಲಿ ಈ ಮೊದಲು ಭಿಕ್ಷುಕರು ಮನೆಗಳಿಗೆ ಬಂದು ಅನ್ನಕ್ಕಾಗಿ ಬೇಡುತ್ತಿದ್ದರು. ಆದರೀಗ ಹುಡುಕಿದರೂ ಭಿಕ್ಷುಕರು ಸಿಗುವುದಿಲ್ಲ. ಕಾರಣ ಸಿಎಂ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ. ನಿಜವಾದ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದು ಬದುಕು ರೂಪಿಸಿಕೊಂಡಾಗ ಆ ಯೋಜನೆಗೆ ಸಾರ್ಥಕತೆ ದೊರೆಯುತ್ತದೆ. ಮಾತನಾಡುವುದು ಸಾಧನೆ ಆಗಬಾರದು. ರಾಜಕೀಯವನ್ನು ಮಠದ ನೆರಳಿಗಾಗಿ ಅಲ್ಲ, ಕರುಳಿಗಾಗಿ ಅಷ್ಟೇ, ನಮಗೆ ಯಾವುದೇ ಪಕ್ಷವಿಲ್ಲ ಎಂದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಎಲ್ಲರೂ ಅಭಿವೃದ್ಧಿಪರ ಚಿಂತನೆ ಮೈಗೂಡಿಸಿಕೊಂಡಿದ್ದರೆ ಮಾತ್ರ ಕಂಪ್ಲಿ ಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿ ಸಾಧ್ಯ ಎಂದರು.

ತಾಲೂಕಿನಲ್ಲಿ ೫೪ ಸಾವಿರ ಫಲಾನುಭವಿಗಳಿಗೆ ₹೧೧ ಕೋಟಿ ಗೃಹಲಕ್ಷ್ಮೀ, ₹೫೫ ಸಾವಿರ ನಾರಿಶಕ್ತಿ ಉಚಿತ ಪ್ರಯಾಣಕ್ಕೆ ₹೨೨ ಕೋಟಿ, ಯುವನಿಧಿ ಫಲಾನುಭವಿಗಳಿಗೆ ₹೩ ಕೋಟಿ ಹಣ ವಿತರಣೆಯಾಗಿದೆ. ತಾಲೂಕಿನ ಎಲ್ಲ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಾಗಿದೆ ಎಂದು ವಿವರಿಸಿದರು.

ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಪ್ರಸ್ತುತ ೫೦ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ. ವಿವಿಧ ಗ್ರಾಮಗಳಲ್ಲಿ ೧೦೦ ಕಿಮೀ ವಿಸ್ತ್ರೀರ್ಣದಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ಮತ್ತು ₹೮೮ ಕೋಟಿ ವೆಚ್ಚದಲ್ಲಿ ಸಿಂಧಿಗೇರಿ-ಬಳ್ಳಾರಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಶ್ರೀನಿರಂಜನ ಪ್ರಭು ಸ್ವಾಮಿ ಮಾತನಾಡಿ, ಜನಪ್ರತಿನಿಧಿಗಳು ಸಮಾಜಕ್ಕಾಗಿ ದುಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎನ್ನುವುದಕ್ಕೆ ಶಾಸಕ ಜೆ.ಎನ್. ಗಣೇಶ್ ಉತ್ತಮ ನಿದರ್ಶನ ಎಂದರು.

ತಹಶೀಲ್ದಾರ್ ನರಸಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಿ.ಬಸವನಗೌಡ, ಭೂ ನ್ಯಾಯಮಂಡಳಿ ಅಧ್ಯಕ್ಷ ತಿಮ್ಮನಗೌಡ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರವಿ ಶರಣಬಸವ, ಅರವಿ ಬಸವನ ಗೌಡ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನರೆಡ್ಡಿ, ತಾಪಂ ಇಒ ಕೆ.ವಿ. ನಿರ್ಮಲ, ಸಿಡಿಪಿಒ ಮೋಹನ್ ಕುಮಾರಿ, ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್ ಇದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’