ಪಂಚ ಮಹಾಯಜ್ಞಗಳು ಎಲ್ಲರಿಗೂ ಅವಶ್ಯಕ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Jul 30, 2025, 12:48 AM IST
ಪೊಟೋ೨೯ಎಸ್.ಆರ್.ಎಸ್೩ (ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ಚಾತುರ್ಮಾಸ್ಯ ವ್ರತಾಚರಣೆ ವೇಳೆ ಕರೂರು ಸೀಮಾ ಭಕ್ತರು ಸಲ್ಲಿಸಿದ ಪಾದಪೂಜೆ ಸ್ವೀಕರಿಸಿ, ಶ್ರೀಗಳು ಆಶೀರ್ವಚನ ನೀಡಿದರು.) | Kannada Prabha

ಸಾರಾಂಶ

ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ಮನುಷ್ಯಯಜ್ಞ ಇವು ಐದು ಯಜ್ಞಗಳು.

ಶಿರಸಿ: ಪಂಚ ಮಹಾಯಜ್ಞಗಳು ನಮಗೆಲ್ಲರಿಗೂ ಅವಶ್ಯಕ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ಚಾತುರ್ಮಾಸ ವ್ರತಾಚರಣೆ ವೇಳೆ ಕರೂರು ಸೀಮಾ ಭಕ್ತರು ಸಲ್ಲಿಸಿದ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ಮನುಷ್ಯಯಜ್ಞ ಇವು ಐದು ಯಜ್ಞಗಳು. ನಮಗೆ ಐದು ಋಣಗಳಿವೆ. ಈ ಋಣಗಳನ್ನು ತೀರಿಸಬೇಕು. ಸಾಲ ಮಾಡಿದ ನಂತರ ಅದನ್ನು ಮರುಪಾವತಿ ಮಾಡುತ್ತಾರೋ ಹಾಗೆಯೇ ಈ ಯಜ್ಞಗಳ ಮೂಲಕ ನಮ್ಮ ಸಾಲರೂಪವಾದ ಋಣಗಳನ್ನು ತೀರಿಸಿಕೊಳ್ಳಬೇಕು. ಇದನ್ನು ತೀರಿಸಿಕೊಳ್ಳದಿದ್ದರೆ ಅದು ನಮ್ಮನ್ನು ಕಟ್ಟಿಹಾಕುತ್ತವೆ. ಮುಂದಿನ ಜನ್ಮಗಳಲ್ಲಿ ಅದು ನಮಗೆ ಬಾಧಿಸುತ್ತವೆ. ಶ್ರೇಯೋಮಾರ್ಗಕ್ಕೆ ಪ್ರತಿಬಂಧಕವಾಗುತ್ತದೆ ಎಂದರು.

ಮಳೆಯ ಮೂಲ ಯಜ್ಞವೇ ಆಗಿದೆ. ಈ ಮಳೆಯ ಹಿಂದಿರುವ ಮೂಲವಾದ ಶಕ್ತಿ ದೇವತೆಗಳು ಮತ್ತು ಯಜ್ಞಗಳು. ಎಂಬುದನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳಿದ್ದಾನೆ. ಯಜ್ಞದಿಂದಲೇ ಮಳೆ, ಬೆಳೆಗಳು ಎಂಬುದಾಗಿ. ಯಜ್ಞದಲ್ಲಿ ದೇವತೆಗಳಿಗೆ ಹವಿಸ್ಸುಗಳು ಅರ್ಪಣೆಯಾಗುತ್ತವೆ. ದೇವತೆಗಳು ಮಳೆಯನ್ನು ಸುರಿಸುತ್ತಾರೆ. ಹೀಗಾಗಿ ಎಲ್ಲ ಸಮೃದ್ಧಿಗೆ ಮಳೆ ಮೂಲವಾಗಿದೆ. ದೇವತೆಗಳಿಗೆ ಯಜ್ಞಗಳ ಅನುಷ್ಠಾನ ಮಾಡಿ ಹವಿಸ್ಸನ್ನು ಸಮರ್ಪಣೆ ಮಾಡುವುದರ ಮೂಲಕ ದೇವಋಣವನ್ನು ತೀರಿಸಿಕೊಳ್ಳಬೇಕು ಎಂದರು.

ಋಷಿಋಣ ನಮಗೆಲ್ಲರಿಗೂ ಇದೆ. ನಮ್ಮ ಎಷ್ಟೋ ಆಚರಣೆಗಳು ಋಷಿಗಳಿಂದಲೇ ಬಂದಿದೆ. ಒಟ್ಟಾರೆಯಾಗಿ ನಮ್ಮ ಜೀವನದಲ್ಲಿ ಋಷಿಗಳ ಕೊಡುಗೆಗಳು ಬಹಳ ಇವೆ. ಇದನ್ನು ವೇದಗಳನ್ನು, ಶಾಸ್ತ್ರಗಳನ್ನು, ಸದ್‌ಗ್ರಂಥಗಳನ್ನು ಅಧ್ಯಯನ ಮಾಡಬೇಕು; ಮಾಡಿಸಬೇಕು. ನಮ್ಮ ಪರಂಪರೆ ಮುಂದುವರಿಯುವ ಹಾಗೆ ಮಾಡಬೇಕು. ಜೀವನ ಪರ್ಯಂತ ಅಧ್ಯಯನ ಮಾಡಬೇಕು. ಅದರಿಂದ ಅನೇಕ ಲಾಭಗಳಿವೆ. ಋಣ ಸಂದಾಯವು ಆಗುತ್ತದೆ ಎಂದರು.

ಈ ವೇಳೆ ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ, ಸುಬ್ರಾಯ ಹೆಗಡೆ, ಗಣಪತಿ ಹೆಗಡೆ, ಮಹಾಬಲೇಶ್ವರ ಹೆಗಡೆ, ಜಿ.ಆರ್.ಭಟ್ಟ ಇದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೯೫ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀಗಳು ಅಭಿನಂದಿಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’