ಕನ್ನಡಪ್ರಭ ವಾರ್ತೆ ಚಿತ್ರದುರ್ಗಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಕಲಿಕೆ ಆಧರಿಸಿ, ಶಿಕ್ಷಕರು ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಣೆ ಮಾಡುವುದರ ಮೂಲಕ ಕನಿಷ್ಟ ಕಲಿಕಾ ಸಾಮರ್ಥ್ಯಗಳನ್ನು ಮಾರ್ಗದರ್ಶನ ಮಾಡಬೇಕೆಂದು ಚಿತ್ರದುರ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ ಹೇಳಿದರು.
ಚಿತ್ರದುರ್ಗ ತಾಲೂಕಿನ ಎಲ್ಲಾ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2024-25 ರ ಶೈಕ್ಷಣಿಕ ವರ್ಷದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಹಾಗೂ ಐಚ್ಚಿಕ ವಿಷಯಗಳ ಕನಿಷ್ಟ ಕಲಿಕಾ ಸಾಮರ್ಥ್ಯಗಳ ಜೊತೆಗೆ ನಿಗಧಿತ ಪಠ್ಯ, ಸಹಪಠ್ಯವು ಸಹ ಮಾರ್ಗದರ್ಶನ ಮಾಡಬೇಕೆಂದರು. ಶಾಲಾ ಮುಖ್ಯಸ್ಥರು ಸರ್ಕಾರದ ನಿರ್ದೇಶನದಂತೆ ಶಾಲೆಗಳಲ್ಲಿ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.
ಚಿತ್ರದುರ್ಗ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಈ. ಸಂಪತ್‌ಕುಮಾರ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆ ಸರಿಯಾದ ಕ್ರಮದಲ್ಲಿ ಆಗದೇ ಹೋದರೆ ಅವರು ಪ್ರೌಢ ಮತ್ತು ಉನ್ನತ ಹಂತದಲ್ಲಿ ವಿಫಲತೆ ಕಾಣುತ್ತಾರೆ ಈ ಹಿನ್ನೆಲೆ ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಿಗೆ ಭದ್ರಬುನಾದಿ ಎಂದರು. ಚಿತ್ರದುರ್ಗ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಿದಾನಂದಸ್ವಾಮಿ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಮುಖ್ಯಶಿಕ್ಷಕರು ಶಾಲಾ ವಿದ್ಯಾರ್ಥಿಗಳ ಕ್ರೀಡಾನಿಧಿ ಮತ್ತು ಕ್ರೀಡಾಶುಲ್ಕ ಪಾವತಿಸಿ ದಾಖಲಾಗಿರುವ ಎಲ್ಲಾ ಮಕ್ಕಳಿಗೂ ಶಾಲೆಗಳಲ್ಲಿ ನಿಯಮಿತವಾಗಿ ದೈಹಿಕ ಶಿಕ್ಷಣ ಚಟುವಟಿಕೆಗಳನ್ನು ಕೈಗೊಂಡು ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನು ಮಾರ್ಗದರ್ಶನ ನೀಡಬೇಕು ಎಂದರು.ಇದೇ ವೇಳೆ ಶಾಲೆಗಳಲ್ಲಿ ದಿನಕ್ಕೊಂದು ಪ್ರಯೋಗ ಕೈಪಿಡಿಯನ್ನು ಬಿಇಒ ಎಸ್.ನಾಗಭೂಷಣ ಲೋಕಾರ್ಪಣೆಗೊಳಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ನಿಯಮಿತವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳ ಮಾಹಿತಿಯನ್ನು ಮುಖ್ಯಶಿಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಒ ಎಸ್. ನಾಗಭೂಷಣ, ಬಿಆರ್‌ಸಿ ಸಂಪತ್‌ಕುಮಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಚಿದಾನಂದಸ್ವಾಮಿ, ಇಸಿಒಗಳಾದ ಎಂ.ಆರ್ ನಾಗರಾಜು, ರಮೇಶರೆಡ್ಡಿ, ಬಿಆರ್‌ಪಿ ಖಲಂದರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ತಾಲೂಕು ಅಧ್ಯಕ್ಷ ಕೆಂಚಪ್ಪ, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಗೌರವಾಧ್ಯಕ್ಷ ಕೆ.ವೀರಣ್ಣ, ಸನೌ ಸಂಘದ ಎಚ್.ಈರಣ್ಣ, ಸಿಆರ್‌ಪಿಗಳಾದ ಮಲ್ಲಿಕಾ, ತಿಮ್ಮರಾಜು, ವೆಂಕಟೇಶ ಪಾಪಣ್ಣರೆಡ್ಡಿ, ಶಿವರುದ್ರಪ್ಪ, ಮುಖ್ಯಶಿಕ್ಷಕರಾದ ವೆಂಕಟೇಶ, ಒ.ಚಿತ್ತಯ್ಯ, ಶಿವಪ್ಪ, ರೇಣುಕಾ, ಮಂಜುಳಾ, ಮಹಾಲಿಂಗಪ್ಪ, ನರಸಿಂಹಮೂರ್ತಿ, ಚಿತ್ರದುರ್ಗ ತಾಲೂಕು ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಶಾಲಾ ಮುಖ್ಯಸ್ಥರು ಇದ್ದರು.