ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ಯಾಂತ್ರಿಕ ವಾತಾವರಣದ ಪ್ರಭಾವದಲ್ಲಿ ಎಲ್ಲರೂ ಎಂಜಿನಿಯರಿಂಗ್ - ಮೆಡಿಕಲ್ ಮುಂತಾದ ಲೌಕಿಕ ಶಿಕ್ಷಣವನ್ನು ಬಯಸುತ್ತಿದ್ದಾರೆ. ಆದರೆ ಸ್ವಸ್ತಿ ಪ್ರಜಾಭ್ಯಃ ಎಂದು ವಿಶ್ವದ ಕ್ಷೇಮವನ್ನು ನಿಸ್ವಾರ್ಥವಾಗಿ ಬಯಸುವವರು ಪುರೋಹಿತರು. ಇಂಥಹ ಪುರೋಹಿತರ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಅವರು ಭಾನುವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ಅಲಂಕರಿಸಿ ಮಾತನಾಡಿದರು. ಪುತ್ತಿಗೆ ವಿದ್ಯಾಪೀಠದ 38ನೇ ಶೈಕ್ಷಣಿಕ ವರ್ಷವನ್ನು ಪರಮಪೂಜ್ಯ ಶ್ರೀಪಾದರು ಶಾಂತಿ ಮಂತ್ರವನ್ನು ಉಪದೇಶ ಮಾಡುವ ಮೂಲಕ ಪ್ರಾರಂಭಿಸಿದರು.
ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಕಣ್ವ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಮಾಜದ ಮಧ್ಯದಲ್ಲಿರುವ ಈ ಯುವ ವಿದ್ವಾಂಸರು ಗುರುಗಳ ಆಶಯದಂತೆ ಸದ್ಗುಣ -ಸದಾಚಾರ ಸಂಪನ್ನರಾಗಿ ಹತ್ತಾರು ಜನರಿಗೆ ಧಾರ್ಮಿಕ ಮಾರ್ಗದರ್ಶನವನ್ನು ನೀಡುವಂತಾಗಲಿ ಎಂದು ಆಶೀರ್ವದಿಸಿದರು.ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಂಗಳದ ವಿದ್ಯಾರ್ಥಿಗಳಿಗೆ ಉಪದೇಶವನ್ನು ಮಾಡಿ ಅನುಗ್ರಹಿಸಿದರು.
ಪೂಜ್ಯ ಕಣ್ವ ಮಠಾಧೀಶರಿಗೆ ಪರ್ಯಾಯ ಮಠದ ಪರವಾಗಿ ಪ್ರಸನ್ನಾಚಾರ್ಯರು ಮಾಲಿಕೆ ಮಂಗಳಾರತಿಯನ್ನು ಮಾಡಿ ಗೌರವವನ್ನು ಅರ್ಪಿಸಿದರು.ಮಂಗಳೂರಿನ ಕದ್ರಿ ದೇವಸ್ಥಾನದ ಅರ್ಚಕರಾದ ಪ್ರಭಾಕರ ಅಡಿಗರು ಸಂಪಾದಿಸಿರುವ ‘ಉದಕ ಶಾಂತಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು, ಶತಾವಧಾನಿ ರಾಮನಾಥ ಆಚಾರ್ಯ ಉಡುಪಿ, ವಿದ್ವಾನ್ ಪ್ರಕಾಶಾಚಾರ್ಯ ಮುಂಬೈ, ವಿದ್ವಾನ್ ರಾಮದಾಸ ಉಪಾಧ್ಯಾಯ ಮುಂಬೈ, ವಿದ್ವಾನ್ ರಾಜೇಶ್ ಭಟ್ ಮುಂಬೈ, ವಿದ್ವಾನ್ ಪ್ರವೀಣಾಚಾರ್ಯ ಚೆನ್ನೈ, ವಿದ್ವಾನ್ ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯರು, ವಿದ್ವಾನ್ ಶ್ರೀನಿವಾಸಾಚಾರ್ಯ ಹೊನ್ನೆದಿಬ್ಬ ಬೆಳಗಾಂ, ವಿದ್ವಾನ್ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ, ವಿದ್ವಾನ್ ಶ್ರೀಪತಿ ಆಚಾರ್ಯ, ಪಾಡಿಗಾರು, ವಿದ್ವಾನ್ ಪಂಜ ಭಾಸ್ಕರ್ ಭಟ್, ವಿದ್ವಾನ್ ಕೇಂಜ ಶ್ರೀಧರ ತಂತ್ರಿ, ವಿದ್ವಾನ್ ಶ್ರೀಧರ ಉಪಾಧ್ಯಾಯ ಕುಂಭಾಶಿ, ಶಿಕ್ಷಣ ತಜ್ಞರಾದ ರೋಹಿತ್ ಚಕ್ರತೀರ್ಥ ಮತ್ತು ಅನೇಕ ಜಿಜ್ಞಾಸುವೃಂದ ಭಾಗವಹಿಸಿದ್ದರು.ಶ್ರೀಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಶ್ರೀನಿಧಿ ಆಚಾರ್ಯರು ಸ್ವಾಗತಿಸಿದರು. ಡಾ.ಬಿ.ಗೋಪಾಲಾಚಾರ್ಯರು ಶ್ರೀ ಪುತ್ತಿಗೆ ವಿದ್ಯಾಪೀಠದ ಸಾಧನೆಗಳ ಪರಿಚಯವನ್ನು ಮಾಡಿದರು. ವಿದ್ವಾನ್ ಯೋಗೀಂದ್ರ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.