ಲಕ್ಷ್ಮೇಶ್ವರ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಮನೋಭಾವ ಬೆಳೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜ್ಞಾನಕ್ಕೆ, ವೈಚಾರಿಕತೆಗೆ ಚಂದನ ಶಾಲೆ ಬಹಳ ಮಹತ್ವ ಕೊಟ್ಟಿದೆ. ನಮ್ಮ ದೇಶ ಅನೇಕ ಜಾತಿ, ಧರ್ಮಗಳಿಂದ ಕೂಡಿದೆ. ನಾವು ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಸಮ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಈ ದೇಶದಲ್ಲಿ ಅಸಮಾನತೆ ಇದ್ದು, ಅದು ಹೋಗಲಿಕ್ಕೆ ಏನು ಮಾಡಬೇಕು? ಕಂದಾಚಾರ ಬಿಡಬೇಕು. ಅದಕ್ಕೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸಬೇಕು, ಅಂದಾಗ ಮನುಷ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಮೌಢ್ಯಗಳನ್ನು ಆಚರಿಸುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಯನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶಃ ಜಾರಿಯಾಗದೇ ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಒಳ್ಳೆಯ ವ್ಯಕ್ತಿತ್ವ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಹೀಗೆ ಹಲವಾರು ಧರ್ಮಗಳಿವೆ, ಯಾವ ಧರ್ಮವೂ ದ್ವೇಷವನ್ನು ಹುಟ್ಟುಹಾಕಿಲ್ಲ. ಎಲ್ಲ ಧರ್ಮಗಳು ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಬೇಕು ಎಂದು ಹೇಳುತ್ತವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿವೆ. ಕಷ್ಟದಲ್ಲಿದ್ದಾಗ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ ಯಾವುದೇ ವರ್ಗದವರು ಕೂಡ ಸಾಧನೆ ಮಾಡಬಹುದಾಗಿದೆ. ಶಿಕ್ಷಣ ಯಾರಪ್ಪನ ಸೊತ್ತಲ್ಲ. ಪ್ರಾಮಾಣಿಕ ಪ್ರಯತ್ನ, ಅವಕಾಶ ಬಹಳ ಮುಖ್ಯ. ಅದನ್ನು ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನಕ್ಕೆ ತಲುಪಬಹುದು. ಮೌಢ್ಯಗಳನ್ನು, ಕಂದಾಚಾರಗಳನ್ನು ದೂರ ಮಾಡಬೇಕು. ವೈಚಾರಿಕತೆ, ವೈಜ್ಞಾನಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಚಂದನ್ ಸ್ಕೂಲ್‌ನ ಸಂಸ್ಥಾಪಕ ಟಿ. ಈಶ್ವರ, ಶಾಸಕ ಜಿ.ಎಸ್. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ದೊಡ್ಡಮನಿ, ಮುಖಂಡರಾದ ಸುಜಾತಾ ದೊಡ್ಡಮನಿ, ಆನಂದ ಗಡ್ಡದೇವರಮಠ ಹಾಜರಿದ್ದರು.
ಬಿ.ಎಸ್. ಪಾಟೀಲ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು. ಜೆ.ಎಚ್. ಪಟೇಲ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚು ಕೆಲಸಗಳನ್ನು ಇವರೇ ಮಾಡಿ, ಅವರಿಗೆ ಒತ್ತಡ ಇಲ್ಲದಂತೆ ಮಾಡುತ್ತಿದ್ದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಲು ಪಾಟೀಲ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈಗಲೂ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ವರದಿ ಸಲ್ಲಿಸಿದ್ದಾರೆ. ಗ್ರೇಟರ್ ಬೆಂಗಳೂರಿನ ಒಳಗೆ ಐದು ಕಾರ್ಪೊರೇಷನ್‌ಗಳನ್ನಾಗಿ ವಿಭಜಿಸಲಾಗಿದೆ. ಪಾಟೀಲ ಅವರು ಈ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಚಂದನ ಎಜ್ಯುಕೇಶನಲ್ ಸಂಸ್ಥೆ 2025 ನೇ ಸಾಲಿನ ಚಂದನ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.