ಬಳ್ಳಾರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯ ಜತೆಗೆ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿ ಹೇಳಿದರು.
ಕೌಶಲ್ಯ ಕಲಿಯುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ. ಯುವಜನರು ಉದ್ಯೋಗದಾತರ ನಿರೀಕ್ಷೆಗಳಿಗೆ ತಕ್ಕಂತೆ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯ ಹೊಂದಬೇಕು ಎಂದರು.
ಸಂಜೀವರಾಯನಕೋಟೆ ಸಮೀಪ 600 ಎಕರೆ ಪ್ರದೇಶದಲ್ಲಿ ₹5 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ಗಾರ್ಮೆಂಟ್ ಪಾರ್ಕ್ ಆರಂಭಿಸುವ ಯೋಜನೆ ಇದ್ದು, ಇದರಿಂದ ಬಳ್ಳಾರಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿವೆ. ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳಿಗೆ ತಮ್ಮ ಟಚ್ ಫಾರ್ ಲೈಫ್ ಫೌಂಡೇಶನ್‌ನಿಂದ ₹10 ಲಕ್ಷಗಳ ನೆರವು ನೀಡುವುದಾಗಿ ನಾರಾ ಭರತರೆಡ್ಡಿ ಘೋಷಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಮಾತನಾಡಿ, ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಕೌಶಲ್ಯ ತರಬೇತಿ ಕೇಂದ್ರವು ಹಲವು ಯುವಜನರ ಭವಿಷ್ಯ ರೂಪಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಐಟಿ ಕಮಿಟಿ ಚೇರ್ಮನ್ ಪಿ.ವೇಣುಗೋಪಾಲ ಗುಪ್ತ, ಜಾಬ್ ಪೋರ್ಟಲ್ ಉದ್ಯೋಗದಾತರು ಮತ್ತು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ವಿವಿಧ ಸಂಸ್ಥೆಗಳು ತಮ್ಮ ಉದ್ಯೋಗದ ಅವಶ್ಯಕತೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗಾಕಾಂಕ್ಷಿಗಳೂ ತಮ್ಮ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವದ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ, ಉಪಾಧ್ಯಕ್ಷ ಸೊಂತ ಗಿರಿಧರ್, ಪಿ.ಪಾಲಣ್ಣ, ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ ಹಾಗೂ ಖಜಾಂಚಿ ಎಸ್. ಸತ್ಯನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.