)
ಧಾರವಾಡ:
ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಶೇಷವಾಗಿ ಗಣೇಶ ಹಬ್ಬದ ರಜೆಗೆಂದು ಊರಿಗೆ ಬಂದಿರುವವರು ಇ-ಕೆವೈಸಿಗಾಗಿ ಪಡಿತರ ಅಂಗಡಿಗಳ ಎದುರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಗಟ್ಟಲೆ ಅಂಗಡಿ ಎದುರು ಕಾಯುತ್ತಿದ್ದರೂ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಡೀ ದಿನ ಪಡಿತರ ಅಂಗಡಿಗಳ ಮುಂದೆ ನಿಲ್ಲಬೇಕಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲವು ಪಡಿತರ ಅಂಗಡಿಯಲ್ಲಿ ನೂರಾರು ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಬೇಕಿದ್ದು, ಸರ್ವರ್ ಸಮಸ್ಯೆಯಿಂದ ಪ್ರತಿದಿನ ಕೆಲವೇ ಸಂಖ್ಯೆಯಲ್ಲಿ ಗ್ರಾಹಕರಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಎಲ್ಲ ಪಡಿತರ ಚೀಟಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ.