ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ: ಡಾ.ಅನಿಲ್

KannadaprabhaNewsNetwork |  
Published : Aug 14, 2025, 01:00 AM IST
೧೩ಕೆಎಂಎನ್‌ಡಿ-೧ಮಂಡ್ಯದ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವಲ್ಲಿ ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. | Kannada Prabha

ಸಾರಾಂಶ

ಯಾವುದೇ ಸಮಸ್ಯೆ, ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಅಂತಿಮ ಪರಿಹಾರವಲ್ಲ. ವ್ಯಕ್ತಿತ್ವದ ನ್ಯೂನತೆ, ಖಿನ್ನತೆ, ಕೀಳರಿಮೆ, ಮಾದಕ ವ್ಯಸನಗಳು, ಸಂಬಂಧಗಳಲ್ಲಾಗುವ ಬಿರುಕುಗಳು, ಭಾವಾತಿರೇಕಗಳು, ದುಡುಕು, ಕೋಪ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಆತ್ಮಹತ್ಯೆಗೆ ಪ್ರಯತ್ನಿಸುವವರಿಗೂ ಸಾಯುವ ಬಯಕೆ ಇರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೀವನದಲ್ಲಿ ಎದುರಾಗುವ ಕಷ್ಟಗಳು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಯುವಕರು ಬೆಳೆಸಿಕೊಂಡಾಗ ಆತ್ಮಹತ್ಯೆಯಂತಹ ಆಲೋಚನೆಗಳು ಸುಳಿಯುವುದಿಲ್ಲ ಎಂದು ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ಹೇಳಿದರು.

ನಗರದ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವಲ್ಲಿ ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿ, ಯುವಕರು ಮಾನಸಿಕವಾಗಿ ಸಬಲರಾಗಬೇಕು. ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಸಮಸ್ಯೆಗಳು ಎದುರಾದಾಗ ಎದೆಗುಂದಬಾರದು. ಮಾನಸಿಕವಾಗಿ ಕುಗ್ಗದೆ ಅದನ್ನು ಸಮರ್ಥವಾಗಿ ಎದುರಿಸುವ ಬುದ್ಧಿವಂತಿಕೆಯನ್ನು ಪ್ರದರ್ಶಿಸುವವರು ಆತ್ಮಹತ್ಯೆಗೆ ಎಂದಿಗೂ ಶರಣಾಗಲಾರರು ಎಂದರು.

ಯಾವುದೇ ಸಮಸ್ಯೆ, ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಅಂತಿಮ ಪರಿಹಾರವಲ್ಲ. ವ್ಯಕ್ತಿತ್ವದ ನ್ಯೂನತೆ, ಖಿನ್ನತೆ, ಕೀಳರಿಮೆ, ಮಾದಕ ವ್ಯಸನಗಳು, ಸಂಬಂಧಗಳಲ್ಲಾಗುವ ಬಿರುಕುಗಳು, ಭಾವಾತಿರೇಕಗಳು, ದುಡುಕು, ಕೋಪ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಆತ್ಮಹತ್ಯೆಗೆ ಪ್ರಯತ್ನಿಸುವವರಿಗೂ ಸಾಯುವ ಬಯಕೆ ಇರುವುದಿಲ್ಲ. ಏನನ್ನೋ ತಿಳಿಸಲು ಬಯಸುವ ಮಾರ್ಗವಾಗಿ ಆತ್ಮಹತ್ಯೆ ಪ್ರಯತ್ನ ನಡೆಸುತ್ತಾರೆ. ಕೆಲವೊಮ್ಮೆ ಅದು ಸಾವಿನಲ್ಲಿ ಕೊನೆಗೊಳ್ಳುತ್ತದೆ ಎಂದರು.

ಮಾನಸಿಕವಾಗಿ ವಿಮುಖನಾದ, ಆತ್ಮಹತ್ಯೆ ಬಯಕೆ ಮತ್ತು ಪ್ರಯತ್ನ ನಡೆಸುವವರನ್ನು ಗುರುತಿಸಿ ಅಂತಹವರಿಗೆ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ಕೊಡಿಸಿದರೆ ಆತ್ಮಹತ್ಯೆಗಳನ್ನು ತಡೆಯಬಹುದು. ಯುವಜನರು ಸಾಮಾಜಿಕ ಜಾಲ ತಾಣಗಳು, ಅಪರಾಧ ಚಟುವಟಿಕೆಗಳ ವೈಭವೀಕರಣಗಳಿಂದ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಾರೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಏಳು-ಬೀಳು ಸಾಮಾನ್ಯ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಫೇಲಾದಾಕ್ಷಣ ಜೀವನ ಅಲ್ಲಿಗೆ ಮುಗಿದುಹೋಯಿತು ಎಂದು ಭಾವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಬಾರದು. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕು. ಶಿಕ್ಷಣ ಜ್ಞಾನವನ್ನು ನೀಡುತ್ತದೆ. ಆ ಜ್ಞಾನವನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳುವುದು ಮುಖ್ಯ. ಶಿಕ್ಷಣದಲ್ಲಿ ಯಶಸ್ಸನ್ನು ಕಾಣಲಾಗದ ಎಷ್ಟೋ ಮಂದಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅಂತಹವರ ಬದುಕು ಯುವಕರಿಗೆ ಮಾದರಿಯಾಗಬೇಕು ಎಂದರು.

ಯುವಕರು ಈ ದೇಶದ ಶಕ್ತಿ ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಯುವಕರು ಒಗ್ಗಟ್ಟಿನಿಂದ ದೇಶದ ಪ್ರಗತಿಗೆ ಶ್ರಮಿಸುವ ಆಲೋಚನೆಗಳನ್ನು ಹೊಂದಬೇಕು. ಮಾದಕ ವಸ್ತುಗಳ ಚಟ, ಮೊಬೈಲ್ ಗೀಳಿನಿಂದ ದೂರ ಉಳಿದು ಬದುಕನ್ನು ಸಮರ್ಥವಾಗಿ ಮತ್ತು ಸದೃಢವಾಗಿ ಕಟ್ಟಿಕೊಳ್ಳುವ ಕಡೆ ಗಮನವಿರಬೇಕು. ಆಸಕ್ತಿದಾಯಕ ಕ್ಷೇತ್ರಗಳನ್ನು ಆಯ್ದುಕೊಂಡು ಅಲ್ಲಿ ಉನ್ನತ ಹಂತಕ್ಕೇರುವ ಮನೋಭಾವ ಯುವ ಮನಸ್ಸುಗಳಲ್ಲಿ ಮೂಡಿದಾಗ ಆತ್ಮಹತ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಅದಕ್ಕಾಗಿ ದಾರ್ಶನಿಕರು, ಮಹನೀಯರ ಪುಸ್ತಕಗಳನ್ನು ಓದುವುದರೊಂದಿಗೆ ಮಾನಸಿಕ ಚೈತನ್ಯಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಹೇಳಿದರು.

ಇದೇ ವೇಳೆ ಡಾ.ಅನಿಲ್ ಆನಂದ್ ಅವರು ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಯುವಮನಸ್ಸುಗಳು ಸದೃಢವಾಗುವುದಕ್ಕೆ ಹಲವು ಟಿಪ್ಸ್‌ಗಳನ್ನು ನೀಡಿದರು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವವರು, ಆತ್ಮವಿಶ್ವಾಸವಿದ್ದವರು ಎಂದಿಗೂ ಆತ್ಮಹತ್ಯೆ ಯೋಚನೆ ಮಾಡಲಾರರು ಎಂದರು.

ಕಾರ್ಯಕ್ರಮದಲ್ಲಿ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನ ಛೇರ‌್ಮನ್ ಕಾರ್ತಿಕ್, ಪ್ರಾಂಶುಪಾಲ ತೇಜಶ್ರೀ, ಚಂಪಾಕಲ, ಕುಲ್ಸಮ್, ತಾರಾಶ್ರೀ ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌