ಕನ್ನಡಪ್ರಭ ವಾರ್ತೆ ಆಳಂದ
ಭವಿಷ್ಯದ ಕಲಾತ್ಮಕ ಮತ್ತು ಗುಣಾತ್ಮಕ ಶಿಕ್ಷಣದ ಹಸಿವನ್ನು ನೀಗಿಸುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಲು ಭಾವಿ ಶಿಕ್ಷಕರು ಮುಂದಾಗಬೇಕು ಎಂದು ವಿಜಯಪುರ ಗೆಜ್ಜೆ ಕೆರಿಯರ ಅಕಾಡೆಮಿ ನಿರ್ದೇಶಕ ಸುರೇಶ ಗೆಜ್ಜೆ ಹೇಳಿದರು.ಗುವಿವಿ ಹಾಗೂ ಪಟ್ಟಣದ ರಾಜಶೇಖರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ (ಬಿಎಡ್) ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಸಿಯುತ್ತಿರುವ ಇಂದಿನ ಮೌಲ್ಯಗಳನ್ನು ಪುನರುಸ್ಥಾನಗೊಳಿಸಿಕೊಳ್ಳಬೇಕು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶಿಕ್ಷಕರಾಗುವುವರು ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನದೊಂದಿಗೆ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದರು.ನಂದಗಾಂವ ಮಠದ ರಾಜಶೇಖರ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷರಲ್ಲಿ ಮಾನವೀಯ ಮೌಲ್ಯ, ಸಂಸ್ಕಾರ ಒಳಗೊಂಡು ಅದನ್ನು ಕಾರ್ಯಗತ ಮಾಡಿದರೆ ಮುಂದಿನ ಮಕ್ಕಳು ಇದನ್ನು ಅನುಕರಿಸುತ್ತಾರೆ. ಇದರಿಂದ ಸುಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.
ಕಲಬುರಗಿ ದಕ್ಷಿಣ ವಲಯ ಸಮನ್ವಯಾಧಿಕಾರಿ ಡಾ. ಪ್ರಕಾಶ ರಾಠೋಡ, ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು. ಕಲಬುರಗಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ರಾಜಶೇಖರ ಸ್ವಾಮೀಜಿ ಬಿಎಡ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ರೈಜಾ ಬೇಗಾಂ ಮತ್ತು ಮೇಘಾ ಕಣ್ಮುಸ್ ಅವರಿಗೆ ತಲಾ ₹25 ಸಾವಿರ ಚೆಕ್ ನೀಡಿ ಸನ್ಮಾನಿಸಿ ಗೌರವಿಸಿದರು.ವಿವಿಗೆ ದ್ವಿತೀಯ ಮತ್ತು ತೃತೀಯ ರ್‍ಯಾಂಕ್ ಪಡೆದ ಪ್ರಶಿಕ್ಷಣಾರ್ಥಿ ಶಂಕರಲಿಂಗ ಮತ್ತು ಪರಮೇಶ್ವರ ಅವರಿಗೆ ತಲಾ ₹11 ಸಾವಿರ ಚೆಕ್ ನೀಡಿ ಗೌರವಿಸಿದರು. ಕಾಲೇಜಿನ ಬಿಎಡ್ ಪ್ರಶಿಕ್ಷಣಾರ್ಥಿಗಳು ಅಭ್ಯಾಸ ಪೂರೈಸಿದ 11 ಮಂದಿ ಸರ್ಕಾರಿ ಹುದ್ದೆಗೆ ಆಯ್ಕೆಯಾದವರನ್ನು ಅವರು ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ವಿಕೆಜೆ ಡಿಗ್ರಿ ಪ್ರಾಚಾರ್ಯ ಕೆ.ಎಸ್. ಸಾವಳಗಿ, ಎಂಎಆರ್‌ಜಿ ಪಿಯು ಪ್ರಾಚಾರ್ಯ ಡಾ. ಅಪ್ಪಾಅಸಾಬ ಬಿರಾದಾರ ಮಾತನಾಡಿದರು.ಪಿಎಸ್‍ಆರ್‌ಎಂಎಸ್ ಬಿಇಡ್ ಪ್ರಾಚಾರ್ಯ ಡಾ. ಅಶೋಕ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಶಿಕ್ಷಣಾರ್ಥಿ ಅನ್ನಪೂರ್ಣ ನಿಪ್ಪಾಣೆ, ನಿವೇದಿತ ನಿರೂಪಿಸಿದರು. ಮಲ್ಕಣ್ಣಾ ಬಿರಾದಾರ ವಂದಿಸಿದರು.