ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತೀಯ ಜನತಾಪಕ್ಷದ ಜಿಲ್ಲಾ ಘಟಕದಲ್ಲಿ ಬಂಡಾಯದ ಗಾಳಿ ಬೀಸಿದೆ. ಪಕ್ಷದ ಜಿಲ್ಲಾ ಘಟಕಕ್ಕೆ 2ನೇ ಬಾರಿ ಅಧ್ಯಕ್ಷರಾಗಿ ಮುಂದುವರಿದಿರುವ ಮುರುಳಿ ಅವರ ನೇಮಕದ ಬಗ್ಗೆ ತೀವ್ರ ತೆರನಾದ ಅಪಸ್ವರ ಮೂಡಿರುವುದು ಬಂಡಾಯ ಗಾಳಿ ಬೀಸಲು ಕಾರಣವಾಗಿದೆ.ಗುರುವಾರ ನಗರದ ಹೊರವಲಯದ ಕಲ್ಯಾಣಮಂಟಪದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿದ್ದರೆ ಇತ್ತ ಬಂಡುಕೋರರು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ಆಕ್ರೋಶ ಹೊರ ಹಾಕಿದರು. ಕೆಲ ಮಂಡಳ ಅಧ್ಯಕ್ಷರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ನೆಲಕಚ್ಚಿದ್ದು, ಇದಕ್ಕೆ ಕಾರಣವಾಗಿರುವವರನ್ನು ಮುಂದುವರಿಸಲಾಗಿದೆ. ಕಾರ್ಯಕಾರಿಣಿ ಹೆಸರಲ್ಲಿ ಸೋತವರೆಲ್ಲ ಒಂದೆಡೆ ಸೇರಿ ತಮ್ಮ ಪ್ರಲಾಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹವರ ಮುಂದಿಟ್ಟುಕೊಂಡು ಹೋದರೆ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಿದಂತೆಯೇ ಎಂದು ಬಂಡುಕೋರರು ಅಸಮಧಾನ ಹೊರ ಹಾಕಿದರು.ಕಾರ್ಯಕಾರಿಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಜಿ ಶಾಸಕರಾದ ಜಿ ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ಮಾಜಿ ಸಂಸದ ಜನಾರ್ಧನ ಸ್ವಾಮಿ ಸೇರಿ ಹಲವರು ಪಾಲ್ಗೊಂಡಿದ್ದರು. ಆದರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಪ ಸದಸ್ಯ ನವೀನ್ ಅವರು ಗೈರಾಗಿದ್ದರು.
ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿದ್ದ ಬಂಡುಕೋರರು ಒಂದು ಅಂಶದ ಕಾರ್ಯಕ್ರಮ ಇಟ್ಟುಕೊಂಡಿದ್ದರು.ಬಿಜೆಪಿ ಜಿಲ್ಲಾದ್ಯಕ್ಷ ಎ.ಮುರುಳಿ ವಿರುದ್ಧ ಕಿಡಿಕಾರಿದರು. ಮುರುಳಿ ಹಠಾವೋ ಬಿಜೆಪಿ ಬಚಾವೋ ಎಂದು ಘೋಷಣೆ ಕೂಗಿದರು. ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷೆ ರತ್ನಮ್ಮ, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಯುವ ಮೋರ್ಚಾ ಜಿಲ್ಲಾದ್ಯಕ್ಷ ಪಾಲಯ್ಯ ಸೇರಿ ಹಲವು ಮುಖಂಡರು ಬಂಡಾಯ ಸಭೆಯಲ್ಲಿ ಪಾಲ್ಗೊಂಡಿದ್ದರು.