ಹೂವಿನಹಡಗಲಿ: ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ಓದು ಜನಮೇಜಯ ಅಭಿಯಾನದಲ್ಲಿ ಕಾಲೇಜಿನ ಭಾಷಾ ಸಂಘ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಹಾಗೂ ಸಿಂಚನ ಪ್ರಕಾಶನದ ಸಹಯೋಗದಲ್ಲಿ ವಿಶ್ವ ಪುಸ್ತಕ ದಿನ, ಕವಿಯತ್ರಿ ಸವಿತಾ ನಾಗಭೂಷಣರವರ ಯುದ್ಧ ವಿರೋಧಿ ಶಾಂತಿ ಗೀತೆಗಳು, ಕಾವ್ಯ ಕೃತಿಯ ನೂರು ಪುಸ್ತಕಗಳ ಕೊಡುಗೆ ಮತ್ತು ಕಾವ್ಯ ಓದು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಡಾ. ಎಚ್.ಪಿ.ರಮೇಶ, ಶಿಕ್ಷಕ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ಕಥೆ, ಕಾದಂಬರಿ, ನಾಟಕ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದರು.ವರ್ತಮಾನ ತಲ್ಲಣಗಳಿಗೆ ಸೃಜನಶೀಲ ಸಾಹಿತ್ಯ ಸ್ಪಂದನೆ ಅಗತ್ಯವಿದೆ, ಪುಸ್ತಕಗಳು ನಮ್ಮ ಜೀವನದಲ್ಲಿ ಉತ್ತಮ ಸ್ನೇಹಿತವಾಗಿದ್ದು, ಪುಸ್ತಕ ಸಂಸ್ಕೃತಿಯಿಂದ ದೂರ ಉಳಿಯಬಾರದು ಎಂದರು.
ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿ ಆಸಕ್ತಿ ಪ್ರೇರೇಪಿಸುವ ನಿಟ್ಟಿನಲ್ಲಿ ಕನ್ನಡದ ಮೇರು ಸಾಹಿತಿಗಳ ಕೃತಿಗಳನ್ನು ಕೊಡುಗೆಯಾಗಿ ನೀಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.ಶಾಖಾ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 12 ಗಂಟೆ ಸತತ ಅಧ್ಯಯನ ಮಾಡಲು ಗ್ರಂಥಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಜ್ಞಾನ ಪಡೆದುಕೊಳ್ಳಿ ಎಂದು ಹೇಳಿದರು.
ಪತ್ರಕರ್ತ ಎಂ. ದಯಾನಂದ ಮಾತನಾಡಿ, ಬಿಇಡಿ ವಿದ್ಯಾರ್ಥಿಗಳು ಅಬ್ದುಲ್ ಕಲಾಂ, ಅಂಬೇಡ್ಕರ್ ಅವರಂತೆ ಓದಿನಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯ ಎಂದರು.ಕಾಲೇಜಿನ ಭಾಷಾ ಸಂಘಗಳ ಸಂಚಾಲಕ ಡಾ.ಅಶೋಕ್ ಈಡಿಗರ, ಡಾ. ಎಂ.ಪಿ.ಎಂ.ಮಂಜುನಾಥ, ಎ.ಕೆ.ನಾಗರಾಜ ಮಾತನಾಡಿ, ಕನ್ನಡದ ಹೆಸರಾಂತ ಲೇಖಕರ ಕೃತಿ ಸಂಗ್ರಹಿಸಿ ಓದಿರಿ ಎಂದು ತಿಳಿಸಿದರು.
ಶಿಕ್ಷಕ ವಿದ್ಯಾರ್ಥಿನಿ ಎಚ್. ಭಾಗ್ಯ ಮಾತನಾಡಿ, ವಿಶ್ವ ಪುಸ್ತಕ ದಿನಾಚರಣೆ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಸವಿತಾ ನಾಗಭೂಷಣ ಯುದ್ಧ ವಿರೋಧಿ ಶಾಂತಿ ಗೀತೆಗಳು ಕಾವ್ಯ ಕೃತಿಯ ಕವನಗಳನ್ನು ಶಿಕ್ಷಕ ವಿದ್ಯಾರ್ಥಿಗಳಾದ ಸೋನಿಯಾ ಬಾಯಿ, ಹುಲಿಗೆಮ್ಮ ಶಿಗಾಣಿ, ಕೆಂಚಪ್ಪ ಎಸ್, ಸಿಂಧೂ ಎಸ್.ಎಂ,
ರೇಖಾ ಪಿ,ಎನ್.ಎಸ್.ವೀರಭದ್ರ, ಸಿದ್ದಪ್ಪ ಕುರಿ ವಾಚಿಸಿದರು. ಕವಿಗಳಾದ ನಾಗಮಂಜುಳಾ ಜೈನ್, ಟಿ.ಎಂ.ನಾಗಭೂಷಣ ಉಪನ್ಯಾಸಕ ಭೋಜರಾಜ್, ನೆಪೋಲಿಯನ್, ವಿರುಪಾಕ್ಷಪ್ಪ, ಭಾಸ್ಕರ್ ನಂದಿ ಇತರರು ಉಪಸ್ಥಿತರಿದ್ದರು. ಜ್ಯೋತಿ ಪಿ,ಸಿ ಪುನೀತ್ ಕುಮಾರ್,ಮಂಜುಳಾ ಬಿ.ಕೆ, ಎಸ್ ಪಿ ಅರ್ಪಿತಾ ನಿರ್ವಹಿಸಿದರು.ಪುಸ್ತಕ ದಿನಾಚರಣೆ ಅಂಗವಾಗಿ ವಿವಿಧ ಪ್ರಕಾಶಕರ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.