ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಮೌಲ್ಯ ಬೆಳೆಸಿ: ಶಂಕರ ಭಟ್ಟ ತಾರೀಮಕ್ಕಿ

KannadaprabhaNewsNetwork |  
Published : May 06, 2025, 12:16 AM IST
ಫೋಟೋ ಮೇ.೫ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಸಮಾಜದಲ್ಲಿಂದು ಮಕ್ಕಳಿಗೆ ಬದುಕಿಗೆ ಬೇಕಾದ ಸಂಸ್ಕಾರ ನೀಡುವಲ್ಲಿ ಪಾಲಕರು ತೀರಾ ಹಿಂದೆ ಬೀಳುತ್ತಿದ್ದಾರೆ.

ಯಲ್ಲಾಪುರ: ಸಮಾಜದಲ್ಲಿಂದು ಮಕ್ಕಳಿಗೆ ಬದುಕಿಗೆ ಬೇಕಾದ ಸಂಸ್ಕಾರ ನೀಡುವಲ್ಲಿ ಪಾಲಕರು ತೀರಾ ಹಿಂದೆ ಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳು ಮಾತ್ರ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಯಲ್ಲಾಪುರ ಯೋಗ ಫೆಡರೇಶನ್ ಆಫ್ ಇಂಡಿಯಾದ ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಹೇಳಿದರು.

ಅವರು ಭಾನುವಾರ ಪಟ್ಟಣದ ಸ.ಹಿ.ಪ್ರಾ. ಮಾದರಿ ಶಾಲೆಯ ಆವಾರದಲ್ಲಿ ರಂಗಸಹ್ಯಾದ್ರಿ, ಓಂಕಾರ ಯೋಗ ಕೇಂದ್ರ, ಸ.ಹಿ.ಪ್ರಾ. ಮಾದರಿ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ೨೫ ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರಿಂದು ಕೇವಲ ಅಂಕವೇ ಪ್ರಧಾನವೆಂದು ಭಾವಿಸಿ ಮಕ್ಕಳ ಮೇಲೆ ಒತ್ತಡ ಹೇರಿ ಓದಿಸುವುದಕ್ಕೇ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಸಂಸ್ಕಾರ, ಸಂಸ್ಕೃತಿ, ಮೌಲ್ಯ ಬೆಳೆಸಿಕೊಳ್ಳದಿದ್ದರೆ ಮುಂದಿನ ಬದುಕು ಕಷ್ಟವಾದೀತು. ಇಂದು ಅನೇಕ ಯುವಕರು ಕೇವಲ ಮೊಬೈಲ್, ಕಂಪ್ಯೂಟರ್ ಮುಂದೆ ಕುಳಿತು ತಮ್ಮ ಕುಟುಂಬ, ಬಂಧು-ಬಳಗವನ್ನು ನಿರ್ಲಕ್ಷಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆ ನೆಲೆಯಲ್ಲಿ ಇಂತಹ ಶಿಬಿರಗಳು ಅತ್ಯಂತ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವ್ಕರ ಮಾತನಾಡಿ, ನೈತಿಕ ಶಿಕ್ಷಣ ಕಣ್ಮರೆಯಾಗುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯಿಂದ ದೂರ ಹೋಗುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ನಾವು ೨೦ನೇ ವರ್ಷದಲ್ಲಿ ಈ ಶಿಬಿರವನ್ನು ಆಯೋಜಿಸಿ ಇಲ್ಲಿ ನೃತ್ಯ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಮರಕಾಲು, ಯೋಗ, ಸೇರಿದಂತೆ ೧೮ ವಿಷಯಗಳನ್ನು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕಲಿಸಿಕೊಟ್ಟಿದ್ದೇವೆ. ವಿಶೇಷವಾಗಿ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಗಣಪತಿ ಬೋಳಗುಡ್ಡೆ ಮಾತನಾಡಿ, ಈ ಶಿಬಿರ ಮಕ್ಕಳು ಸಮಯ ಕಳೆಯುವುದಕ್ಕಾಗಿ ಅಲ್ಲ. ಸಂಸ್ಕೃತಿ, ನೈತಿಕತೆ, ಸಂಸ್ಕಾರ ನೀಡುವಂತಹ ಮೌಲ್ಯಯುತ ಶಿಕ್ಷಣವಾಗಿದೆ ಎಂದರು.

ಮಾದರಿ ಶಾಲೆಯ ಮುಖ್ಯಾಧ್ಯಾಪಕಿ ಅನುಸೂಯಾ ಹಾರ್ವಾಡಕರ್ ಸಾಂದರ್ಭಿಕ ಮಾತನಾಡಿದರು. ಲಕ್ಷ್ಮೀ ಭಟ್ಟ ಚಿಮ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮಿ ಶಂಕರ ಭಟ್ಟ ಆನೇಜಡ್ಡಿ ಸ್ವಾಗತಿಸಿದರು. ಸುಮಂಗಲಾ ಜೋಶಿ ನಿರ್ವಹಿಸಿದರು. ನ್ಯಾಯವಾದಿ ಬೇಬಿ ಅಮೀನಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ