ಕನ್ನಡಪ್ರಭ ವಾರ್ತೆ ವಿಜಯಪುರ
ಉತ್ತಮ ಆಹಾರ ಸೇವನೆ, ಆಚಾರ-ವಿಚಾರ, ಪ್ರತಿದಿನ ದೈಹಿಕ ವ್ಯಾಯಾಮವುಳ್ಳ ಸರಳ ವ್ಯಕ್ತಿತ್ವದ ಜೀವನಶೈಲಿ ಇದ್ದರೇ ಆಂತರಿಕ ಶಕ್ತಿ ವೃದ್ಧಿ ಆಗುತ್ತದೆ ಎಂದು ನಗರದ ಯಶೋಧಾ ಆಸ್ಪತ್ರೆಯ ಮುಖ್ಯಸ್ಥರು, ಲಯನ್ಸ್ ಪರಿವಾರದ ಹಿರಿಯ ನಿರ್ದೇಶಕ ಡಾ.ರವೀಂದ್ರ ಮದ್ರಕಿ ಹೇಳಿದರು.ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರ ಹಾಗೂ ವಿಜಯಪುರ ನಗರ ಘಟಕದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಳ ಜೀವನ ನಡೆಸುವ ವ್ಯಕ್ತಿಗೆ ನೆಮ್ಮೆದಿ ಮತ್ತು ಯಾವತ್ತೂ ಉಲ್ಲಾಸ ಇರುತ್ತದೆ. ಉಲ್ಲಾಸದಿಂದಿರುವವರು ಯಾವತ್ತೂ ಕ್ರಿಯಾಶೀಲರಿದ್ದು, ಏನಾದರೊಂದು ಹೊಸತನ ಮಾಡುತ್ತ ಸಮಾಜಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ. ಇಂದಿನ ದಿನಮಾನದಲ್ಲಿ ಬಹುತೇಕ ಜನರು ಸಕ್ಕರೆ ಖಾಯಿಲೆ, ಹೃದಯ ರೋಗ, ರಕ್ತದೊತ್ತಡ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಅದರಿಂದ ಕಿಡ್ನಿ ವೈಫಲ್ಯದ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ ಎಂದರು.ರಕ್ಷಣಾ ವೇದಿಕೆಯ ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ ಮಾತನಾಡಿ, ಸಾಮಾಜಿಕ ಸೇವೆಗೆ ಮುಂಚೂಣಿಯಲ್ಲಿರುವ ಅಂತಾರಾಷ್ಷ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಹಾಗೂ ಅನ್ಯಾಯದ ವಿರುದ್ಧ ಯಾವತ್ತೂ ಹೋರಾಟ, ಪ್ರತಿಭಟಿಸುವ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ಸದಸ್ಯರು ಇವತ್ತು ಸಮಾಜದಲ್ಲಿ ಉತ್ತಮ ಸೇವೆ ಮಾಡುತ್ತಿರುವ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ವ್ಯಕ್ತಪಡಿಸಿದರು.ಲಯನ್ಸ್ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ರಾ.ಜಾಧವ ಮಾತನಾಡಿ, ಲಯನ್ಸ್ ಪರಿವಾರವು ಇಲ್ಲಿಯವರೆಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಈಗ ತಮ್ಮ ವೃತ್ತಿ ಮತ್ತು ಸಮಾಜದಲ್ಲಿ ಬಹಳಷ್ಟು ಸೇವೆಗಳನ್ಣು ಮಾಡುತ್ತಿರುವ ಮತ್ತು ಯಾವತ್ತೂ ಕ್ರಿಯಾಶೀಲರಿರುವ ನೂತನ ಸದಸ್ಯರು ಸೇರ್ಪಡೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಲಯನ್ಸ್ ಪರಿವಾರ ಹಾಗೂ ರಕ್ಷಣಾ ವೇದಿಕೆಯ ಸಹಯೋಗದಲ್ಲಿ ಹಲವಾರು ರೀತಿಯ ಸಮಾಜ ಸೇವೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಲಯನ್ಸ್ ಪರಿವಾರದ ಅಧ್ಯಕ್ಷ ಚಿದಾನಂದ ನಿಂಬಾಳ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ಲಯನ್ಸ್ ಪರಿವಾರದ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ನನ್ನ ಪುಣ್ಯ. ಇಂತಹ ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಂಡು ನಮ್ಮ ಅವಧಿಯಲ್ಲಿ ಶಾಶ್ವತ ನೆನಪಿನಲ್ಲಿ ಉಳಿಯುವ ಸೇವೆಯನ್ನು ಮಾಡಲು ನಾನು ಮತ್ತು ನಮ್ಮ ಎಲ್ಲ ಸದಸ್ಯರು ತಯಾರಿದ್ದೇವೆ. ಹಲವು ರೀತಿಯ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ತಮ್ಮ ತಂಡದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಲಯನ್ಸ್ ಪರಿವಾರದ ನಿರ್ಗಮಿತ ಅಧ್ಯಕ್ಷರು ಹಾಗೂ ತಮ್ಮ ಅವಧಿಯಲ್ಲಿನ ಸಮಾಜ ಸೇವೆಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಶಿಕಲಾ ಇಜೇರಿ, ಕರ್ನಾಟಕ ಸಹಕಾರರತ್ನ ರಾಜ್ಯ ಪ್ರಶಸ್ತಿ ಪಡೆದ ರಜನಿ ಸಂಬಣ್ಣಿ ಮತ್ತು ಧರ್ಮರಾಯ ಮಮದಾಪುರ, ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ಲಯನ್ಸ್ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ರಾ.ಜಾಧವ, ಡಾ.ರವೀಂದ್ರ ಮದ್ರಕಿಯವರನ್ನು ಗೌರವಿಸಿ ಸನ್ಮಾನಿಲಾಯಿತು.ಕಾರ್ಯಕ್ರಮದಲ್ಲಿ ಲಯನ್ಸ್ ಪರಿವಾರದ ಕಾರ್ಯದರ್ಶಿಗಳಾದ ವಿದ್ಯಾ ಕೊಟೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಖಜಾಂಚಿಯವರಾದ ಪುಷ್ಪಾ ಮಹಾಂತಮಠ ವರದಿ ವಾಚನ ಮಾಡಿದರು. ಪ್ರೊ.ಎಂ.ಬಿ.ರಜಪೂತ ವಂದನಾರ್ಪಣೆ ಮಾಡಿದರು. ಸತ್ಯಕಾಮ ಕಟ್ಟಿಯವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಪರಿವಾರ ಮತ್ತು ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಮಹೇಶ ನಾಯಕ, ರಾಜೇಶ ಗಾಯಕವಾಡ, ಅನಿತಾ ಕುಮಸಿ, ಇಂದುಮತಿ ಕನ್ನೂರ, ರಷ್ಮಿ ಚಿತ್ತವಾಡಗಿ, ವಾಲು ಚವ್ಹಾಣ, ಶಾಂತಾ ಉತ್ಲಾಸರ, ಶೈಲಾ ಬಸವಪ್ರಭು, ಸರಿತಾ ಹೊಸಳ್ಳಿ, ಸತ್ಯಕಾಮ ಕಟ್ಟಿ, ಫಯಾಜ್ ಕಲಾದಗಿ, ಚಿದಾನಂದ ನಿಂಬಾಳ, ಪುಷ್ಪಾ ಮಹಾಂತಮಠ ಇವರಲ್ಲದೇ ಯಶೋಧಾ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಬಾಕ್ಸ್..ಡಾ.ರವೀಂದ್ರ ಹುಟ್ಟುಹಬ್ಬದ ನಿಮಿತ್ತ 100 ಉಚಿತ ಹೆರಿಗೆಡಾ.ರವೀಂದ್ರ ಮದ್ರಕಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸುವುದರ ಜೊತೆಗೆ ಸುಮಾರು 100 ಜನ ಬಾಣಂತಿ ತಾಯಂದಿಯರಿಗೆ ತಮ್ಮ ಆಸ್ಪತ್ರೆಯ ವತಿಯಿಂದ ಉಚಿತ ಹೆರಿಗೆ ಮಾಡಿಸಿದ್ದಾರೆ. ಅವರ ಸಮಾಜಮುಖಿ ಸೇವೆ ಗುರುತಿಸಿ ಲಯನ್ಸ್ ಪರಿವಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯವರು ಗೌರವಿಸಿ ಸನ್ಮಾಸಿದರು.