ಸಮುದಾಯ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಅಭಿವೃದ್ಧಿ ಸಾಧ್ಯ: ಸಚಿವ ದರ್ಶನಾಪೂರ

KannadaprabhaNewsNetwork |  
Published : Jan 03, 2024, 01:45 AM IST
ಶಹಾಪುರ ನಗರದ ಎನ್‌ಜಿಒ ಕಾಲೊನಿಯಲ್ಲಿ ಸಿಂಪಿ ಸಮುದಾಯದ ಆರಾಧ್ಯ ದೈವಿಪುರಷ ಜಡೆಶಂಕರಲಿಂಗ ದೇವಸ್ಥಾನದ ಕಟ್ಟಡ ಹಾಗೂ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಲಾಯಿತು. | Kannada Prabha

ಸಾರಾಂಶ

ಸಿಂಪಿ ಸಮಾಜ ಸಮುದಾಯ ಭವನಕ್ಕೆ 10 ಲಕ್ಷ ಅನುದಾನ ನೀಡುವದಾಗಿ ಸಚಿವ ದರ್ಶನಾಪೂರ ಭರವಸೆ ನೀಡಿದರು. ಸಿಂಪಿ ಸಮುದಾಯ ಚಿಕ್ಕದಾಗಿದ್ದರೂ ಭಕ್ತಿಗೆ ಪ್ರಾಧಾನ್ಯತೆ ನೀಡಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರತಿ ಸಮಯದಲ್ಲಿಯೂ ಸಿಂಪಿ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಹಲವಾರು ಸಮುದಾಯಗಳು ಚಿಕ್ಕದಾಗಿವೆ. ಆದರೆ, ಮುಖ್ಯವಾಹಿನಿಗೆ ಬರಲು ಸಂಘಟನಾತ್ಮಕವಾಗಿ ಹೋರಾಡುವ ಮನಸ್ಸು ದೊಡ್ಡದಾಗಿರಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ಎನ್‌ಜಿಒ ಕಾಲೊನಿಯಲ್ಲಿ ನಡೆದ ಸಿಂಪಿ ಸಮುದಾಯದ ಆರಾಧ್ಯ ದೈವಿಪುರಷ ಜಡೆಶಂಕರಲಿಂಗ ದೇವಸ್ಥಾನದ ಕಟ್ಟಡ ಹಾಗೂ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜಾತೀಯತೆ, ಅಸಮಾನತೆ, ಶೋಷಣೆ ಇತ್ಯಾದಿ ತಾಂಡವಾಡುತ್ತಿದ್ದ 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ತತ್ವ, ಚಿಂತನೆಗಳ ಮೂಲಕ ಎಲ್ಲವನ್ನು ತೊಡೆದು ಹಾಕಿ ಜಾತ್ಯಾತೀತತೆ, ಸಮಾನತೆ ಸ್ಥಾಪಿಸಿದರು. ಅದರಂತೆ ಸಿಂಪಿ ಸಮುದಾಯ ಚಿಕ್ಕದಾಗಿದ್ದರೂ ಭಕ್ತಿಗೆ ಪ್ರಾಧಾನ್ಯತೆ ನೀಡಿ ಸಮುದಾಯವಾಗಿದೆ. ಸಮುದಾಯ ಭವನಕ್ಕಾಗಿ 10 ಲಕ್ಷ ರು. ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯಗುರು ನಿಂಗಣ್ಣ ಸಿಂಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯವಾಗಿದ್ದರೂ ಜಡೇಶಂಕರಲಿಂಗ ದೇವಸ್ಥಾನ ಮತ್ತು ಸಮುದಾಯ ಭವನಕ್ಕಾಗಿ ಸಚಿವ ದರ್ಶನಾಪುರ ಅವರ ಕೊಡುಗೆ ಸ್ಮರಣೀಯವಾಗಿದೆ. ಸಮುದಾಯ ಭವನಕ್ಕಾಗಿ 10 ಲಕ್ಷ ರು. ಗಳು ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದ್ದು ಸಂತಸ ತಂದಿದೆ. ಸಮುದಾಯದ ಮುಖಂಡರು ಒಟ್ಟಾಗಿ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಕೈಜೋಡಿಸೋಣ ಎಂದರು.

ಮಾಗಣಗೇರಿ ಬೃಹನ್ಮಠದ ಪೂಜ್ಯ ಡಾ. ವಿಶ್ವರಾಧ್ಯ ಶಿವಾಚಾರ್ಯರು ಮತ್ತು ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಫಕೀರೇಶ್ವರ ಮಠದ ಗುರುಪಾದ ಸ್ವಾಮಿಗಳು ಮತ್ತು ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಮಲ್ಲಣ್ಣ ಸಾಹು ಮಡ್ಡಿ, ಉಪಾಧ್ಯಕ್ಷ ಚಂದ್ರಶೇಖರ ಸಾಹು ಆರಬೋಳ, ಶರಣು ಗಟ್ಟಿನ್, ಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಚೆನ್ನಪ್ಪ ಗಿಂಡಿ, ತಾಲೂಕಾಧ್ಯಕ್ಷ ನಟರಾಜ್ ಗಟ್ಟಿನ್, ಗಿರೆಪ್ಪ ಪಾಟೀಲ್ ವೇದಿಕೆಯಲ್ಲಿದ್ದರು. ಪ್ರಮೋದ ಶಾಬಾದಿ ಸ್ವಾಗತಿಸಿದರು. ಶ್ರೀರಕ್ಷಾ ಗಿಂಡಿ ಸಂಗಡಿಗರು ಭರತನಾಟ್ಯದೊಂದಿಗೆ ಪ್ರಾರ್ಥಿಸಿದರು. ಗೀತಾ ಗಿಂಡಿ ವಂದಿಸಿದರು.

ಶಿವಲಿಂಗಪ್ಪ ಕಾಳಗಿ, ಶರಣಪ್ಪ ಗಿಂಡಿ, ರವೀಂದ್ರ ಗಿಂಡಿ, ಶಂಕರ ಗಟ್ಟಿನ್, ಮಹಾಂತೇಶ ಗಿಂಡಿ, ಎಂ.ಎಸ್. ಪಾಟೀಲ್, ಬಸವರಾಜ ಸಿಂಪಿ, ಶಿವಾನಂದ ನಾಗಲೀಕರ್, ಗುರುರಾಜ ನಾಗಲೀಕರ್, ಬಸವರಾಜ ಗಟ್ಟಿನ್, ಸುಶಾಂತ ಗಿಂಡಿ, ಸದಾನಂದ ಗಿಂಡಿ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ