ಕನ್ನಡಪ್ರಭ ವಾರ್ತೆ ಆಲೂರು
ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.ತಾಲೂಕಿನ ಭಕ್ತರವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಲಾಭದಾಯಕವಾಗಿದೆ. ಹಸುಗಳನ್ನು ಸಾಕುವುದರಿಂದ ಹಾಲು ದೊರೆಯುತ್ತದೆ. ಜೊತೆಗೆ ಕೊಟ್ಟಿಗೆ ಗೊಬ್ಬರ ಸೇರಿಸಿಕೊಂಡು ಬೆಳೆ ಜಮೀನು ಫಲವತ್ತತೆ ಉಳಿಸಿಕೊಳ್ಳಬಹುದು. ಹೀಗಾಗಿ ರೈತರು ಕೃಷಿ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ ಅವಲಂಬಿಸಿರುವುದು ಒಳಿತು. ಈ ಭಾಗದಲ್ಲಿ ನಾನು ಮೂರು ಬಾರಿ ಶಾಸಕನಾಗಿ ವಿರೋಧಪಕ್ಷದ ಸಾಲಿನಲ್ಲಿ ಕುಳಿತಿದ್ದರೂ ಸಹ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಭಾಗದ ಜನರು ಹಿಂದಿನಿಂದಲೂ ನಮ್ಮನ್ನು ಹಾಗೂ ಜೆಡಿಎಸ್ ಪಕ್ಷವನ್ನು ಪ್ರೀತಿಯಿಂದ ಪೋಷಿಸಿದ್ದೀರಿ, ಮುಂದೆಯೂ ನಮ್ಮ ಪಕ್ಷದ ಜೊತೆ ಕೈಜೋಡಿಸಬೇಕು ಎಂದರಲ್ಲದೆ, ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ ಡೇರಿ ದೇವಾಲಯ ಎಂದು ಭಾವಿಸಿದರೆ ಡೇರಿಯಲ್ಲಿ ಯಾವುದೇ ಅವ್ಯವಹಾರ ನಡೆಯುವುದಿಲ್ಲ, ಅದೇರೀತಿ ಸರ್ಕಾರ ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ದೇವಸ್ಥಾನ ನಿರ್ಮಾಣ, ಬಡವರಿಗೆ ಮನೆ ನಿರ್ಮಾಣ, ಕೆರೆ ಅಭಿವೃದ್ಧಿ ಹೀಗೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಜನರ ಒಳಿತಿಗಾಗಿ ದುಡಿಯುತ್ತಿದೆ ಎಂದರು.ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ ಎಸ್ ಮಂಜೇಗೌಡ ಮಾತನಾಡಿ, ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದಾಗಿದೆ. ಹಾಲು ಉತ್ಪಾದಕರು ಡೇರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ಉತ್ತಮವಾಗಿದ್ದಲ್ಲಿ ಉತ್ಪಾದಕರಿಗೆ ಉತ್ತಮ ಬೆಲೆ ಸಿಗುವುದರ ಮೂಲಕ ಸಹಕಾರ ಸಂಘ ಉತ್ತಮವಾಗಿ ಅಭಿವೃದ್ಧಿಯಾಗುತ್ತದೆ. ಹಾಲು ಉತ್ಪಾದಕರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್ ಡಿ ರೇವಣ್ಣ ಹಾಗೂ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಲೇಜು, ಪ್ರೌಢಶಾಲೆಗಳನ್ನು ನೀಡುವುದರ ಮೂಲಕ ಶೈಕ್ಷಣಿಕವಾಗಿ ಹೆಚ್ಚು ಒತ್ತು ನೀಡಿದ್ದರು. ಈ ಭಾಗದ ಜನರು ನಮ್ಮ ಪಕ್ಷಕ್ಕೆ ಯಾವಾಗಲೂ ಆಶೀರ್ವಾದ ಮಾಡಿದ್ದರು ಅದೇ ಮುಂದೆಯೂ ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು ಎಂದರು.ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಪಿಎಲ್ ನಿಂಗರಾಜು, ಹಂಚೂರು ಟಿಎಪಿಸಿಎಂಎಸ್ ಅಧ್ಯಕ್ಷ ಮಂಜೇಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಎಂ ಎಚ್ ರಂಗೇಗೌಡ, ಜೆಡಿಎಸ್ ಮುಖಂಡ ಅಜಯ್ ಅಜ್ಜೇಗೌಡ, ಹಂಚೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ, ಸಂಘದ ಅಧ್ಯಕ್ಷ ಪುಟ್ಟರಾಜು ಮಾಜಿ ಅಧ್ಯಕ್ಷ ಶಾಂತರಾಜ್, ಕೃಷ್ಣೇಗೌಡ, ನಿವೃತ್ತ ಶಿಕ್ಷಕ ರಾಮಚಂದ್ರು ಹಾಗೂ ಇತರರು ಉಪಸ್ಥಿತರಿದ್ದರು.