ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಕಾರಣ, ಅಪರಾಧ, ಎಡ, ಬಲ ಸಿದ್ಧಾಂತಗಳ ಕುರಿತಾಗಿಯೇ ಹೆಚ್ಚು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವು ಸಮಾಜದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡಪ್ರಭ ಕೂಡ್ಲಿಗೆ ತಾಲೂಕು ವರದಿಗಾರ ಭೀಮಣ್ಣ ಗಜಾಪುರ ಅವರ ‘ಕೂಡ್ಲಿಗಿ ವಿಸ್ಮಯ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೇ ಗ್ರಾಮವಾಗಲಿ, ಸಣ್ಣ ಊರು ಆಗಿರಲಿ, ಅಭಿವೃದ್ಧಿ ಕುರಿತಾದ ಸುದ್ದಿ ಪ್ರಕಟವಾದರೆ ಅದು ಇಡೀ ಜಗತ್ತಿನ ಗಮನ ಸೆಳೆಯುತ್ತದೆ. ಸುದ್ದಿಗೆ ಸಂಬಂಧಿಸಿದ ವಿಷಯದಲ್ಲಿ ಸಂಶೋಧನೆ ಆಗಿದ್ದರೆ, ಅದು ಇನ್ನು ಹೆಚ್ಚು ಪ್ರಭಾವ ಬೀರುತ್ತದೆ ಎಂದರು.
ಪತ್ರಿಕೆಗಳ ಅಂದಿನ ಸುದ್ದಿ ಸಂಜೆ ವೇಳೆ ರದ್ದಿ ಎಂದು ಹೇಳಲಾಗುತ್ತದೆ. ಆದರೆ, ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆದ ವ್ಯಕ್ತಿಯೊಬ್ಬ ಮುಂದೊಂದು ದಿನ ತನ್ನ ಶ್ರಮ, ದುಡಿಮೆಯ ಮೂಲಕ ಅದ್ಭುತವಾದ ಜೀವನ ಕಟ್ಟಿಕೊಂಡಿರುವ ಸುದ್ದಿ ಪತ್ರಿಕೆಯಲ್ಲಿ ಬಂದರೆ ಎಲ್ಲರ ಗಮನ ಸೆಳೆಯುತ್ತದೆ. ಅದು ಲಕ್ಷಾಂತರ ಜನರಿಗೆ ಸ್ಫೂರ್ತಿ, ಜೀವನೋತ್ಸಾಹ ನೀಡುತ್ತದೆ. ತಾಲೂಕು ವರದಿಗಾರ ಭೀಮಣ್ಣ ಅವರು ಬರೆದಿರುವ ಇಂತಹ ವರದಿಗಳ ಸಂಗ್ರಹವಾಗಿರುವ ಕೂಡ್ಲಿಗಿ ವಿಸ್ಮಯ ಪುಸ್ತಕ ವಿಶೇಷ ಎನಿಸುತ್ತದೆ. ಇಂತಹ ಪುಸ್ತಕದ ಮೂಲಕ ಪತ್ರಿಕೆಯ ವರದಿ, ಸುದ್ದಿಗಳು ಎಲ್ಲಾ ಕಾಲಕ್ಕೂ ತಾಜಾ ಆಗಿರುತ್ತವೆ ಎಂದು ರವಿ ಹೆಗಡೆ ಹೇಳಿದರು.ಈ ಪುಸ್ತಕವು ಕೊರೋನಾ ಕಾಲದಲ್ಲಿನ ಘಟನೆಗಳು, ಮಾನವೀಯ ವರದಿಗಳು, ಪ್ರಾಣಿ-ಪಕ್ಷಿಗಳು, ಐತಿಹಾಸಿಕ ತಾಣಗಳು ಸೇರಿದಂತೆ ವೈವಿಧ್ಯಮಯ, ಸ್ಫೂರ್ತಿದಾಯಕ ವರದಿಗಳನ್ನು ಒಳಗೊಂಡಿದೆ ಎಂದು ರವಿ ಹೆಗಡೆ ತಿಳಿಸಿದರು.
ಗಜಾಪುರ ಕಾರ್ಯವೈಖರಿ ಮಾದರಿಕನ್ನಡಪ್ರಭ ಸಮನ್ವಯ ಮತ್ತು ವಿಶೇಷ ಯೋಜನೆ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ವರದಿಗಾರಿಕೆ ಜೊತೆಗೆ ಸಂಗೀತ, ಸಾಹಿತ್ಯ, ಜಾನಪದ, ಗ್ರಾಮೀಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪುಸ್ತಕಗಳನ್ನು ರಚಿಸಿರುವ ಭೀಮಣ್ಣ ಅವರ ಕಾರ್ಯವೈಖರಿ ಮಾದರಿಯಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಗ್ರಾಮಾಂತರ ಭಾಗ, ಸಣ್ಣ ಪಟ್ಟಣಗಳಲ್ಲಿನ ಸಮಸ್ಯೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಎಲ್ಲಾ ಆಯಾಮಗಳೊಂದಿಗೆ ಪರಿಶೀಲಿಸಿ ಪ್ರಕಟಿಸುವ ಬರಹಗಳು ಹೆಚ್ಚು ಪರಿಣಾಮ ಬೀರುತ್ತವೆ. ಭೀಮಣ್ಣ ಅವರು ಇಂತಹ ವರದಿಗಳಿಂದಲೇ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.