ಹಾನಗಲ್ಲ: ಕಾಂಗ್ರೆಸ್ ಆಡಳಿತದ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ರಾಜ್ಯದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದ್ದು, ಸರಕಾರ ಗ್ಯಾರಂಟಿಯ ಹೆಸರಿನ ಜಪದಲ್ಲಿಯೇ ಇದೆ ಎಂದು ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ ಕಿಡಿಕಾರಿದರು.ಭಾನುವಾರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಇಡೀ ರಾಜ್ಯದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳೇ ಇಲ್ಲ. ಗ್ಯಾರಂಟಿ ಯೋಜನೆಗೆ ಸಂಪನ್ಮೂಲ ಕ್ರೋಢೀಕರಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಕಾಲದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಂದಾಗಿಲ್ಲ. ಅದಕ್ಕಾಗಿ ಹಣ ಬಿಡುಗಡೆಗೊಳಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಕೂಡ ಜನಸಾಮಾನ್ಯರ ಪರವಾಗಿಲ್ಲ ಎಂದರು.ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನರು ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ರಾಜ್ಯ ಸರಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ರೈತ ಸಮುದಾಯಕ್ಕೆ ಯಾವುದೇ ರೀತಿ ಸ್ಪಂದಿಸದ ಈ ಸರಕಾರಕ್ಕೆ ಬರಗಾಲದ ಪರಿಹಾರವನ್ನೂ ನೀಡಲಾಗುತ್ತಿಲ್ಲ. ಕೇಂದ್ರ ಸರಕಾರ ನೀಡಿದ ಪರಿಹಾರವನ್ನು ನೀಡಿ ಕೈ ತೊಳೆದುಕೊಂಡಿದ್ದಾರೆ. ಬರ ಪರಿಹಾರದ ಹಣವನ್ನು ಬ್ಯಾಂಕುಗಳು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಂಡರೂ ಕ್ರಮ ಕೈಗೊಳ್ಳದ ಸರಕಾರಕ್ಕೆ ರೈತರ ಪರ ಹೇಳಿಕೆ ನೀಡುವುದು ಬಿಟ್ಟರೆ ಏನೂ ಪ್ರಯೋಜನವಾಗಿಲ್ಲ. ಹಾಲು ಉತ್ಪಾದಕರಿಗೆ ೫ ತಿಂಗಳಿಂದ ಪ್ರೋತ್ಸಾಹ ಧನ ನೀಡದೆ ೬೫೨ ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಹಾನಗಲ್ಲ ತಾಲೂಕಿನಲ್ಲಿ ಒಂದೂ ಹೊಸ ಯೋಜನೆಗಳು ಜಾರಿಯಾಗಿಲ್ಲ. ಸಿ.ಎಂ.ಉದಾಸಿ ಅವರು ಆರಂಭ ಮಾಡಿದ ನೀರಾವರಿ ಯೋಜನೆಗಳನ್ನು ಇನ್ನೂ ಮುಗಿಸಲು ಸಾಧ್ಯವಾಗಿಲ್ಲ. ಈ ರಾಜ್ಯದ ಜನತೆಗೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದಿದ್ದಾರೆ.