10 ಕೋಟಿ ವೆಚ್ಚದಲ್ಲಿ ದೇವರಸನಹಳ್ಳಿ ಮುಖ್ಯರಸ್ತೆಯ ಅಭಿವೃದ್ಧಿಗೆ ಚಾಲನೆ

KannadaprabhaNewsNetwork | Published : Mar 25, 2025 12:50 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ, ಇದರ ಫಲವಾಗಿ ಈಗಾಗಲೇ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ 25 ಕೋಟಿ ರು. ಸೇರಿದಂತೆ ಕ್ಷೇತ್ರದಲ್ಲಿ ಸುಮಾರು 200 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ತಡೆಯಿಲ್ಲದಂತೆ ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಕಳೆದ 19 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ತಾಲೂಕಿನ ದೇವರಸನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು 10 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ 10 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ, ದೇವರಸನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಶಿಥಿಲಾವಸ್ಥೆಗೊಂಡು, ರಸ್ತೆ ತುಂಬಾ ಗುಂಡಿ ಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು, ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಾಕಷ್ಟು ಬಾರಿ ಇಲ್ಲಿನ ಜನರು ಬೇಡಿಕೆ ಇಟ್ಟಿದ್ದರೂ ಕೂಡ ಅಭಿವೃದ್ಧಿಪಡಿಸಲು ಮುಂದಾಗಿರಲಿಲ್ಲ, ಈ ಹಿಂದೆ ಇದ್ದ ಶಾಸಕರು ಏಕೆ ರಸ್ತೆ ಅಭಿವೃದ್ಧಿಪಡಿಸಲಿಲ್ಲ ಎಂಬ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ, ನನ್ನ ತಂದೆ ಆರ್. ಧ್ರುವನಾರಾಯಣ್ ಅವರು ಹೇಗೆ ಅಭಿವೃದ್ಧಿಯೇ ಮಾನದಂಡವಾಗಿ ಜನರ ಸೇವೆ ಸಲ್ಲಿಸಿದ್ದರು, ಹಾಗೆಯೇ ನನ್ನದೂ ಕೂಡ ರಾಜಕೀಯ ಕಡಿಮೆ ಅಭಿವೃದ್ಧಿ ಹೆಚ್ಚು ಅಭಿವೃದ್ಧಿಯನ್ನೇ ಮಾನದಂಡವಾಗಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರು.

200 ಕೋಟಿ ಹೆಚ್ಚು ಅನುದಾನ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ, ಇದರ ಫಲವಾಗಿ ಈಗಾಗಲೇ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ 25 ಕೋಟಿ ರು. ಸೇರಿದಂತೆ ಕ್ಷೇತ್ರದಲ್ಲಿ ಸುಮಾರು 200 ಕೋಟಿಗಿಂತಲೂ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ತಡೆಯಿಲ್ಲದಂತೆ ನಡೆಯುತ್ತಿವೆ, ಅಲ್ಲದೆ ಗ್ಯಾರಂಟಿ ಯೋಜನೆಗಳು ಜನರು ಬದುಕು ಕಟ್ಟಿಕೊಳ್ಳಲು ಆಧಾರ ಸ್ತಂಭವಾಗಿವೆ. ನಮ್ಮ ಸರ್ಕಾರ ಸದಾ ಜನತೆಯ ಒಳತಿಗಾಗಿ ಕಾರ್ಯನಿರತವಾಗಿದೆ ಎಂದರು.

ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಆಶೀರ್ವಾದದಿಂದ ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಅಪೆಂಡಿಕ್ಸ್- ಈ ಅನುದಾನದ ಅಡಿಯಲ್ಲಿ ಕ್ಷೇತ್ರಕ್ಕೆ ಸುಮಾರು 15 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ, ಅದರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಗರದ ಹಳ್ಳದಕೇರಿಯಿಂದ ದೇವರಸನಹಳ್ಳಿ, ಉಪ್ಪನಹಳ್ಳಿ ಗ್ರಾಮದವರೆಗೆ ಸುಮಾರು 5.1 ಕಿಮೀ ಉದ್ದದವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಅಲ್ಲದೇ,ದೇವರಸನಹಳ್ಳಿ ಮತ್ತು ಉಪ್ಪಿನಹಳ್ಳಿ ಗ್ರಾಮ ಸೇರಿದಂತೆ ಸುಮಾರು 2,300 ಮೀಟರ್ ಸಿಸಿ ಚರಂಡಿ ನಿರ್ಮಾಣ ಮಾಡಲಾಗುವುದು ಹಾಗೂ 12 ಕಡೆ ಕಲ್ವರ್ಟ್ ನಿರ್ಮಾಣ ಸೇರಿದಂತೆ ಸುಸಜ್ಜಿತವಾಗಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಕಾಮಗಾರಿ ಅತಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು ಈ ಭಾಗದ ಜನರ ಬಹು ವರ್ಷದ ಬೇಡಿಕೆ ಈಡೇರಲಿದೆ ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಉಪ ಚುನಾವಣೆ ವೇಳೆ ದೇವರಸನಹಳ್ಳಿ ರಸ್ತೆಯ ಅಭಿವೃದ್ಧಿಗಾಗಿ 2 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಆದರೆ, 2018ರ ವಿಧಾನಸಭೆ ಚುನಾವಣೆಯ ನಂತರ ಅದನ್ನು ಬೇರೆಡೆಗೆ ವರ್ಗಾಯಿಸಲಾಯಿತು. ಜೊತೆಗೆ ಗ್ರಾಮ ವಿಕಾಸ ಯೋಜನೆಯಡಿ ದೇವರಹಸನಹಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ 1 ಕೋಟಿ ರು. ಅನುದಾನವು ಕೂಡ ಸರಿಯಾಗಿ ಬಳಕೆಯಾಗಲಿಲ್ಲ, ನಂಜನಗೂಡು ನಗರದ ಪಕ್ಕದಲ್ಲಿರುವ ದೇವರಸನಹಳ್ಳಿ ಗ್ರಾಮದ ಅಭಿವೃದ್ಧಿಗಾಗಿ ಶಾಸಕ ದರ್ಶನ್ ಅವರು ವಿಶೇಷ ಆಸಕ್ತಿ ವಹಿಸಿದ್ದು ಸುಮಾರು 10 ಕೋಟಿ ಅನುದಾನವನ್ನು ಮುಖ್ಯರಸ್ತೆಯ ಅಭಿವೃದ್ಧಿಗೆ ನೀಡಿದ್ದಾರೆ ಜೊತೆಗೆ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಒಕ್ಕಲಿಗ ಭವನಕ್ಕೆ 10 ಲಕ್ಷ ಅನುದಾನ ನೀಡುವುದು ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ವಿಧಾನಸಭಾ ಉಸ್ತುವಾರಿ ಸೋಮೇಶ್, ಮುಖಂಡರಾದ ಶ್ರೀನಿವಾಸಮೂರ್ತಿ, ವಿಜಯ್ ಕುಮಾರ್, ನಾಗರಾಜಯ್ಯ, ಇಬ್ಜಾಲ ಕೆಂಡಗಣ್ಣಪ್ಪ, ಸಿದ್ದಲಿಂಗು, ಕಳಲೆ ರಾಜೇಶ್, ಗೋಳೂರು ಮಹದೇವಸ್ವಾಮಿ, ಅಶೋಕ್, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಹಳ್ಳಿ ಶಿವಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ಗ್ರಾಪಂ ಅಧ್ಯಕ್ಷೆ ಸೌಭಾಗ್ಯ, ಉಪಾಧ್ಯಕ್ಷ ನಂಜಪ್ಪ, ಗ್ರಾಪಂ ಸದಸ್ಯರಾದ ಮುದ್ದುಮಾದಶೆಟ್ಟಿ, ನಾರಾಯಣಸ್ವಾಮಿ, ದೊಡ್ಡಮ್ಮ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಚಿನ್ನಂಬಳ್ಳಿ ರಾಜು, ತಾಪಂ ಇಒ ಜೆರಾಲ್ಡ್ ರಾಜೇಶ್, ಲೋಕೋಪಯೋಗಿ ಇಲಾಖೆ ಎಇಇ ಬಸವರಾಜು, ಎಇ ರೇವಣ್ಣ ಸೇರಿದಂತೆ ಹಲವರು ಇದ್ದರು.

Share this article