ಕ್ಷಯರೋಗ ನಿರ್ಮೂಲನೆ-ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ
ಬಳ್ಳಾರಿ ಜಿಲ್ಲೆಯನ್ನು ಕ್ಷಯಮುಕ್ತ ಮಾಡಲು ಪ್ರತಿಯೊಬ್ಬರೂ ಕೈಜೋಡಿಸುವಂತೆ ಸಂಡೂರು ಶಾಸಕಿ ಈ. ಅನ್ನಪೂರ್ಣ ಕರೆ ನೀಡಿದ್ದಾರೆ.
‘ವಿಶ್ವ ಕ್ಷಯರೋಗ ದಿನಾಚರಣೆ-2025’ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಯೋಗದಲ್ಲಿ ನಗರದ ವೈದ್ಯ ಭವನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ 2024ನೇ ಸಾಲಿಗೆ ಎಸ್‌ಟಿಇಪಿ ಯೋಜನೆಯಡಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯವು ಚಿಕ್ಕಮಕ್ಕಳಿನಿಂದ ಹಿರಿಯ ವಯಸ್ಸಿನವರಿಗೂ ಬಾಧಿಸುವಂತಹ ರೋಗವಾಗಿದೆ. ಹೆಚ್ಚಾಗಿ ಧೂಳಿನಿಂದ ಕೂಡಿದ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಬರಬಹುದಾಗಿದೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಜನತೆ ಕ್ಷಯರೋಗದ ಕುರಿತು ಹೆಚ್ಚು ಕಾಳಜಿ ತೆಗೆದುಕೊಳ್ಳದೇ ಇರುವುದು ಕಂಡುಬರುತ್ತಿದ್ದು, ಈ ದಿಶೆಯಲ್ಲಿ ಸೂಕ್ತ ಜಾಗೃತಿ ನೀಡಬೇಕು. ಜತೆಗೆ ಕ್ಷಯರೋಗವನ್ನು ಸಕಾಲದಲ್ಲಿ ಗುರುತಿಸುವ ಕಾರ್ಯದಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಕ್ಷಯಮುಕ್ತ ಬಳ್ಳಾರಿಯನ್ನಾಗಿ ಮಾಡುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಕರೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಲ್ಲೆಯಲ್ಲಿ ಕ್ಷಯ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿವೆ. ಸಂಪೂರ್ಣವಾಗಿ ಕಡಿಮೆ ಮಾಡಲು ಸಾರ್ವಜನಿಕರು ಆರೋಗ್ಯ ಇಲಾಖೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 2024 ಸಾಲಿಗೆ ಕ್ಷಯಮುಕ್ತ ಗ್ರಾಪಂ ಅಧ್ಯಕ್ಷರು ಮತ್ತು ಆ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಬಳ್ಳಾರಿ ತಾಲೂಕಿನ ಭೈರದೇವನಹಳ್ಳಿ, ಎರ‍್ರಗುಡಿ, ಸಂಗನಕಲ್ಲು, ಸಿರಿವಾರ ಮತ್ತು ಕೊರಲಗುಂದಿಯ ಕ್ಷೇತ್ರ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರನ್ನು ಸನ್ಮಾನಿಸಲಾಯಿತು.
ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಜಾಥಾ ಗಮನ ಸೆಳೆಯಿತು. ವಿವಿಧ ಸಾಂಸ್ಕೃತಿ ಕಲಾತಂಡಗಳನ್ನೊಳಗೊಂಡ ಜಾಥಾದಲ್ಲಿ ಆಶಾ-ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.