ರೈತರ ಅಭಿವೃದ್ಧಿ ಸಹಕಾರ ರಂಗದಿಂದ ಮಾತ್ರ ಸಾಧ್ಯ

KannadaprabhaNewsNetwork |  
Published : Nov 19, 2024, 12:52 AM IST
೧೮ಕೆಎಲ್‌ಆರ್-೩ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ,ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಹಕಾರ ಸಪ್ತಾಹದ ಕಾರ್ಯಕ್ರಮ ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರೈತರ ಅಭ್ಯುದಯದಿಂದ ಮಾತ್ರವೇ ದೇಶ ಉಳಿಯಲು ಸಾಧ್ಯ, ಸಹಕಾರ ರಂಗ ಪಡಿತರ ಮಾರಾಟಕ್ಕೆ ಸೀಮಿತವಾಗದೇ ಶಾಲೆ, ವಾಹನ, ಆಸ್ಪತ್ರೆ ಎಲ್ಲವನ್ನು ಮಾಡಬಹುದು, ಆದರೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲವಾಗಿರುವುದು ವಿಷಾದದ ಸಂಗತಿ. ಭ್ರಷ್ಟಾಚಾರ ಮುಕ್ತ ಸಹಕಾರಿ ವ್ಯವಸ್ಥೆ ನಿರ್ಮಾಣ ಇಂದಿನ ಅಗತ್ಯವಾಗಿದೆ,

ಕನ್ನಡಪ್ರಭ ವಾರ್ತೆ ಕೋಲಾರರೈತರು, ಮಹಿಳೆಯರ ಸ್ವಾವಲಂಬನೆ ಸಹಕಾರ ರಂಗದಿಂದ ಮಾತ್ರ ಸಾಧ್ಯ. ಪ್ರತಿ ಗ್ರಾಮದಲ್ಲೂ ಒಂದು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮೂರು ಹಳ್ಳಿಗಳಿಗೊಂದು ರೈತರ ಹಾಗೂ ರೇಷ್ಮೆಬೆಳೆಗಾರರ ಸಹಕಾರ ಸಂಘ ಸ್ಥಾಪಿಸುವ ಅಗತ್ಯವಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಸಹಕಾರ ಇಲಾಖೆ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು’ ವಿಷಯದಡಿ ನಡೆದ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತಸಸಹಕರ ರತ್ನ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತಸವಿದೆ, ನಷ್ಟದಲ್ಲಿದ್ದ ಮುಳಬಾಗಿಲು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಟಿಎಪಿಸಿಎಂಎಸ್ ದುಸ್ಥಿತಿ ಸರಿಪಡಿಸಲು ಪಕ್ಷಭೇದ ಮರೆತು ಎಲ್ಲರೂ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಸ್ಮರಿಸಿದ ಅವರು, ಈ ಸಂಸ್ಥೆ ಮೂಲಕ ಗೊಬ್ಬರ, ಪಡಿತರ ಮಾರಾಟ ನಡೆಸುತ್ತಿದ್ದು, ಇದನ್ನು ಉಳಿಸಿದ ಆತ್ಮತೃಪ್ತಿ ಇದೆ, ೩೦ ಸಾವಿರ ಇದ್ದ ವಹಿವಾಟು ಇಂದು ೨ ಲಕ್ಷ ದಾಟಿದೆ ಎಂದು ತಿಳಿಸಿದರು.ರೈತರ ಅಭ್ಯುದಯದಿಂದ ಮಾತ್ರವೇ ದೇಶ ಉಳಿಯಲು ಸಾಧ್ಯ, ಸಹಕಾರ ರಂಗ ಪಡಿತರ ಮಾರಾಟಕ್ಕೆ ಸೀಮಿತವಾಗದೇ ಶಾಲೆ, ವಾಹನ, ಆಸ್ಪತ್ರೆ ಎಲ್ಲವನ್ನು ಮಾಡಬಹುದು, ಆದರೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲವಾಗಿರುವುದು ವಿಷಾದದ ಸಂಗತಿ ಎಂದ ಅವರು, ಸಹಕಾರ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸಾಧನೆ ಸ್ಮರಿಸಿದರು.ಸಹಕಾರಿ ಕಾಯ್ದೆ ತಿದ್ದುಪಡಿ

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ರಾಜಣ್ಣ ಸೇರಿ ಸಹಕಾರಿ ಕಾಯಿದೆ ತಿದ್ದುಪಡಿ ಈ ರಂಗವನ್ನು ಬಲಗೊಳಿಸುವ ಯತ್ನ ನಡೆಸಿದ್ದಾರೆ. ಈ ಹೊಸಕಾಯಿದೆ ಜಾರಿಯಾದರೆ ೩ ವರ್ಷಗಳಿಗೊಮ್ಮೆ ಚುನಾವಣೆ, ಜಿಲ್ಲಾ, ರಾಜ್ಯ ಹಂತದಲ್ಲಿ ಮೀಸಲು ಸೌಲಭ್ಯ,ಎಲ್ಲಾ ವರ್ಗಗಳಿಗೂ ಅಧ್ಯಕ್ಷರಾಗುವ ಅವಕಾಶ, ನಾಮಿನಿ ಸದಸ್ಯರಿಗೆ ಅಧ್ಯಕ್ಷರಾಗಲು ಅವಕಾಶ ಇಲ್ಲವಾಗುತ್ತದೆ ಎಂದು ತಿಳಿಸಿದರು. ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಹಕಾರಿ ವ್ಯವಸ್ಥೆ ನಿರ್ಮಾಣ ಇಂದಿನ ಅಗತ್ಯವಾಗಿದೆ, ಈ ಕ್ಷೇತ್ರದಲ್ಲಿ ಶ್ರೀನಿವಾಸಗೌಡರು ಮಾಡಿದ ಸಾಧನೆ ಮರೆಯಲು ಸಾಧ್ಯವಿಲ್ಲ, ನೇರವಾಗಿ ರೈತರು, ಮಹಿಳೆಯರಿಗೆ ನೆರವಾಗಲು ಈ ಕ್ಷೇತ್ರದಿಂದ ಮಾತ್ರವೇ ಸಾಧ್ಯ ಎಂದರು.

ನಿವೇಶನಕ್ಕೆ ಕಾಂಪೌಂಡ್ ನಿರ್ಮಿಸಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಪಾಕರಹಳ್ಳಿ ವೆಂಕಟೇಶ್, ನಗರದ ಇಟಿಸಿಎಂ ಆಸ್ಪತ್ರೆ ಮುಂಭಾಗ ಇರುವ ಸಹಕಾರಿ ಯೂನಿಯನ್ ನಿವೇಶನ ರಕ್ಷಣೆಗೆ ಕಾಂಪೌಂಡ್ ನಿರ್ಮಿಸಿಕೊಡಲು ಶಾಸಕರಿಗೆ ಮನವಿ ಮಾಡಿದಾಗ ಕೊತ್ತೂರು ಮಂಜುನಾಥ್ ಈ ಕೆಲಸ ಮಾಡಿಕೊಡುವ ಭರವಸೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲೆಯ ಸಹಕಾರಿ ಕ್ಷೇತ್ರದ ಎರಡು ಕಣ್ಣುಗಳಾಗಿರುವ ಡಿಸಿಸಿ ಬ್ಯಾಂಕ್, ಕೋಚಿಮುಲ್ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವುದು ವಿಷಾದದ ಸಂಗತಿ. ಅದರ ತಾಯಂತಿರುವ ಸಹಕಾರಿ ಯೂನಿಯನ್ ಇದನ್ನು ಸರಿಪಡಿಸುವಪ್ರಯತ್ನ ನಡೆಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಕಲ್ವಮಂಜಲಿ ಬೈರೇಗೌಡ, ಮಾಜಿ ಅಧ್ಯಕ್ಷರುಗಳಾದ ಡಾ.ಇ.ಗೋಪಾಲಪ್ಪ, ಸುರೇಶ್, ನಿರ್ದೇಶಕರಾದ ರಮೇಶ್, ಕೆ.ಎಂ.ಮಂಜುನಾಥ್, ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರೆಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಕುಮಾರ್, ನರಸಾಪುರ ಎಸ್‌ಎಫ್‌ಸಿಎಸ್ ಅಧ್ಯಕ್ಷ ಮುನಿರಾಜು, ಯೂನಿಯನ್ ಸಿಇಒ ಕೆ.ಎಂ.ಭಾರತಿ, ಸಿಬ್ಬಂದಿಗಳಾದ ಲಕ್ಷ್ಮಿ, ರವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ