-ಗ್ರಾ.ಪಂ. ಕರ ವಸೂಲಿ ವಿಶೇಷ ಅಭಿಯಾನ | ಜಿಪಂ ಯೋಜನಾ ನಿರ್ದೇಶಕರ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನ ಕೋಳಿಹಾಳ, ಆಗತೀರ್ಥ, ಮುದನೂರ, ಅರಕೇರಾ ಜೆ ಗ್ರಾಮಗಳಲ್ಲಿ ನಡೆದ ಬೃಹತ್ ಕರ ವಸೂಲಿ ವಿಶೇಷ ಅಭಿಯಾನದ ಪ್ರಯುಕ್ತ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಪಿ.ಬಿ ದೇವರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮ ಪಂಚಾಯಿತಿ ಕರ ವಸೂಲಿ ಅಭಿಯಾನದ ಪ್ರಯುಕ್ತ ಪಾವತಿದಾರರ ಮನೆ ಮನೆಗೆ ಭೇಟಿ ನೀಡಿ, ಹೆಚ್ಚು ಕರ ಪಾವತಿಸಿ ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸಿಸಲು ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.
ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಜಿಲ್ಲಾ ಪಂಚಾಯಿತಿ ನೀಡಿದ ನಿರ್ದೇಶನದಂತೆ ಕರ ಸಂಗ್ರಹ ಒಂದು ದಿನದ ಬೃಹತ್ ಅಭಿಯಾನ ಪ್ರಾರಂಭಿಸಲಾಗಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಬಾಕಿ ಇರುವ ಹಾಗೂ ಪ್ರಸಕ್ತ ಸಾಲಿನ ತೆರಿಗೆ ಪಾವತಿ ಮಾಡಲು ಗ್ರಾಮದ ಪ್ರತಿಯೊಬ್ಬ ನಾಗರಿಕರು ತೆರಿಗೆ ಕಟ್ಟಿ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಗ್ರಾಮೀಣ ಜನರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಪಾವತಿಸುವ ತೆರಿಗೆಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ನಾನಾ ಕಾಮಗಾರಿಗಳ ಅನುಷ್ಠಾನ ಮಾಡಲು ಸಹಾಯವಾಗುತ್ತದೆ. ಆದ್ದರಿಂದ, ಮನೆ-ಮನೆಗೆ ಭೇಟಿ ನೀಡಿ, ನಿಗಧಿತ ಕರ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.ತಾ.ಪಂ ಅಧಿಕಾರಿ ಬಸಣ್ಣ ನಾಯಕ ಮಾತನಾಡಿ, ಕರ ವಸೂಲಿಯಲ್ಲಿ ನಿಗದಿತ ಗುರಿಗೆ ಅನುಸಾರವಾಗಿ 18 ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿ, ಕರ ವಸೂಲಿಗಾರರು, ಎನ್‌ಆರ್‌ಎಲ್‌ಎಮ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ
ಕರ ವಸೂಲಿ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿ, ಕರ ಪಾವತಿಸುವಂತೆ ಮನವೂಲಿಸಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಗ್ರಾಮದ ಜನರೂ ತಪ್ಪದೇ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ ತೆರಿಗೆ ಪಾವತಿಸುವ ಮೂಲಕ ಗ್ರಾಮ ಪಂಚಾಯಿತಿಯನ್ನು ಮೂಲಭೂತ ಸೌಕರ್ಯದೊಂದಿಗೆ ಆರ್ಥಿಕವಾಗಿ ಸದೃಢಗೊಳಿಸಬೇಕು.ತಾಲೂಕಿನ ಪ್ರತಿಯೊಂದು ಮನೆಯ ಕರ ಕಟ್ಟುವದರಿಂದ ಗ್ರಾಮದ ರಸ್ತೆ, ಚರಂಡಿ, ಕುಡಿವ ನೀರು ಪೂರೈಕೆ, ಸ್ವಚ್ಛತೆ, ಅಗತ್ಯ ಮೂಲ ಸೌಲಭ್ಯ ಒದಗಿಸಲು, ಆರೋಗ್ಯ ಹಾಗೂ ಶಿಕ್ಷಣ ಸೇರಿ ಇತರೆ ಕೆಲಸಗಳಿಗೆ ಬಳಸಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಶ್ರೀಶೈಲ್ ಹಳ್ಳಿ, ಗುರುರಾಜ ಜೋಶಿ,ನರೇಗಾ ಯೋಜನೆಯ ತಾಂತ್ರಿಕ ಸoಯೋಜಕ ಸುನೀಲ್ ಕುಮಾರ್, ಐಇಸಿ ಸಂಯೋಜಕ ಮಲ್ಲಿಕಾರ್ಜುನ, ಕರ ವಸೂಲಿಗಾರರು, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.-
19ವೈಡಿಆರ್6 : ಹುಣಸಗಿ ತಾಲೂಕಿನ ಕೋಳಿಹಾಳ, ಆಗತೀರ್ಥ, ಮುದನೂರ, ಅರಕೇರಾ ಜೆ ಗ್ರಾಮಗಳಲ್ಲಿ ನಡೆದ ಬೃಹತ್ ಕರ ವಸೂಲಿ ವಿಶೇಷ ಅಭಿಯಾನದ ಪ್ರಯುಕ್ತ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಪಿ.ಬಿ ದೇವರಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.