ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಹಳೆಯ ಜಿಲ್ಲಾಧಿಕಾರಿ ಆವರಣದಲ್ಲಿ ಸಂಸದ ಕಚೇರಿಯಲ್ಲಿ ಶಾಸ್ತ್ರೋಸ್ತ್ರವಾಗಿ ಪೂಜೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಕುಪ್ಪಂ, ಬಂಗಾರಪೇಟೆ, ಶ್ರೀನಿವಾಸಪುರ, ಶಿಡ್ಲಘಟ್ಟ ಮಾರ್ಗವಾಗಿ ಬಾಗೇಪಲ್ಲಿಗೆ, ಹೊಸಕೋಟೆ ಮಾರ್ಗವಾಗಿ ಬಾಗೇಪಲ್ಲಿ, ಕೋಲಾರ ಹೊಸೂರು ಎನ್.ಎಚ್ ಮಾರ್ಗ ಪ್ರಸ್ತಾವನೆಯಲ್ಲಿದೆ. ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಬಜೆಟ್‌ಗೆ ಸೇರ್ಪಡೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೋಲಾರ ವೈಟ್ ಫೀಲ್ಡ್ ಮಾರ್ಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.೫೦ರಷ್ಟು ಭೂಮಿ ಸ್ವಾಧೀನಕ್ಕೆ ಪಡೆಯಬೇಕೆಂಬುವುದಾಗಿ ಅಥವಾ ಪೂರ್ಣ ಭೂಮಿಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದರೆ ಉಳಿದ ಶೇ.೧೦೦ರಷ್ಟು ವೆಚ್ಚ ಬೋರ್ಡ್ ಭರಿಸುವುದಾಗಿ ಹೇಳಲಾಗಿತ್ತು, ಈ ಯೋಜನೆಯ ಪ್ರಸ್ತಾವನೆಯು ನೆನಗುದಿಗೆ ಬಿದ್ದಿರುವುದಕ್ಕೆ ಮರುಜೀವ ಕೊಡಬೇಕಾಗಿದೆ ಎಂದರು.ಕೋಲಾರ, ವಡಗೂರು, ಮುಳಬಾಗಿಲು, ನಂಗಲಿ, ಮದನಪಲ್ಲಿ ರೈಲು ಮಾರ್ಗವು ಪ್ರಸ್ತಾವನೆಯಲ್ಲಿದೆ, ಇದರ ಜೊತೆಗೆ ಶ್ರೀನಿವಾಸಪುರ ಮೂಲಕ ಮದನಪಲ್ಲಿ ಮಾರ್ಗವೂ ಸೇರಿ ಎರಡು ಯೋಜನೆಗಳಿದ್ದು, ಇವುಗಳಲ್ಲಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ, ರೈಲ್ವೆ ಕೋಚ್ ಕಾರ್ಖಾನೆ ಈ ಹಿಂದೆ ಪ್ರಸ್ತಾವನೆಯಲ್ಲಿದ್ದು, ಬದಲಾಗಿ ವರ್ಕಶಾಪ್ ಮಾಡಲು ನಿರ್ಧರಿಸಲಾಗಿತ್ತು, ಇದಕ್ಕೆ ಸಂಬಂಧಪಟ್ಟ ಭೂಮಿಯನ್ನು ರಾಜ್ಯ ಸರ್ಕಾರವು ಇನ್ನೂ ನೀಡದಿರುವುದರಿಂದ ವಿಳಂಬವಾಗಿದೆ, ಈ ಕುರಿತು ಸಚಿವ ಸೋಮಣ್ಣರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಕೆಜಿಎಫ್ ವ್ಯಾಪ್ತಿಯ ಬಿಜಿಎಂಎಲ್ ಕಾರ್ಖಾನೆಗೆ ಸೇರಿದ ೧೨ ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕೆಗಳ ಹಬ್ ನಿರ್ಮಿಸಲು ಮುಂದಾಗಿದೆ, ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲಕರವಾಗಲಿದೆ, ಈ ಯೋಜನೆಯು ೨೦೦೮ರಲ್ಲಿ ಆಗಿನ ಸಚಿವರಾದ ಆಲಂಗೂರು ಶ್ರೀನಿವಾಸ್ ಅವರ ಕನಸಾಗಿತ್ತು.ಇದು ಸುಮಾರು ೨೦ ಕೋಟಿ ರು. ಯೋಜನೆಯಾಗಿತ್ತು. ಆದರೆ ಆರ್ಥಿಕ ಸಮಸ್ಯೆಯಿಂದ ಕೈಗೆತ್ತಿಕೊಂಡಿರಲಿಲ್ಲ, ಈಗ ಇದಕ್ಕೆ ಪುನರ್ ಚಾಲನೆ ನೀಡಬೇಕಾಗಿದೆ ಎಂದರು.
ಕೋಲಾರ ಜಿಲ್ಲೆಗೆ ಸಂಬಂಧಿಸಿ ಇಬ್ಬರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿ ೪ ಮಂದಿಯ ನಿಯೋಗವು ಸರ್ಕಾರದೊಂದಿಗೆ ಚರ್ಚಿಸಿ ಅಭಿವೃದ್ಧಿ ಯೋಜನೆಗಳನ್ನು ತರುತ್ತೇವೆ, ಅಧಿಕಾರಿಗಳು ನಮ್ಮ ನಡುವಳಿಕೆಗಳಿಗೆ ತಕ್ಕಂತೆ ಸ್ಪಂದಿಸುತ್ತಾರೆ. ಯಾವುದೇ ಕೆಲಸಗಳು ಕಾನೂನು ಪ್ರಕಾರ ಇದ್ದಲ್ಲಿ ಅನುಷ್ಠಾನಕ್ಕೆ ತರಲು ಒತ್ತಡ ತರಬಹುದಾಗಿದೆ ಎಂದು ಪ್ರತಿಕ್ರಿಯಿಸಿದರು.
ಅವಿಭಜಿತ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ:
ಜಿಲ್ಲೆಯ ಜನತೆಯು ಸೇವೆ ಸಲ್ಲಿಸಲು ಆಶೀರ್ವಾದಿಸಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎನ್.ಡಿ.ಎ.ಯಲ್ಲಿ ಜೆಡಿಎಸ್ ಪಕ್ಷವೂ ಒಂದು ಭಾಗವಾಗಿದೆ, ಕುಮಾರಸ್ವಾಮಿ ನಮ್ಮ ರಾಜ್ಯದಿಂದ ಕೇಂದ್ರ ಸಚಿವರಾಗಿದ್ದಾರೆ. ಮೋದಿಯವರ ೫ ವರ್ಷಗಳ ಆಡಳಿತದಲ್ಲಿ ಉತ್ತಮ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.