ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಂವಿಧಾನದ ಆಶಯದಂತೆ ನೆಮ್ಮದಿಯಿಂದ ಬದುಕುವ ವ್ಯವಸ್ಥೆಯನ್ನು ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಲಯಗಳು ಅಚ್ಚುಕಟ್ಟಾಗಿ ಮಾಡುತ್ತಿವೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ.ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು.ಜು.13ರಂದು ರಾಷ್ಟ್ರೀಯ ಲೋಕ ಆದಾಲತ್ ಕಾರ್ಯಕ್ರಮ ನಡೆಸುವ ಬಗ್ಗೆ ಗುರುವಾರ ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನ್ಯಾಯಾಲಗಳಲ್ಲಿ ಕೆಲವು ಪ್ರಕರಣಗಳನ್ನು ರಾಜೀ ಸಂಧಾನಗಳ ಮೂಲಕ ಬಗೆ ಹರಿಸುವ ಪ್ರಯತ್ನ ಮಾಡಬೇಕು. ಆಗ ಎರಡೂ ಕಡೆಯ ಕಕ್ಷಿದಾರರಲ್ಲಿ ನೆಮ್ಮದಿ ಭಾವ ಆವರಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವಾ ಕೇಂದ್ರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಕರಿಯಣ್ಣ ಮಾತನಾಡಿ, ಪುರಸಭೆ, ನಗರ ಸಭೆಗಳಲ್ಲಿ ಆಸ್ತಿ ತೆರಿಗೆ ಪಾವತಿ ರಿಯಾಯಿತಿಯನ್ನು ಸೀಮಿತ ಅವಧಿಗೆ ಮಾತ್ರ ನೀಡುವ ವ್ಯವಸ್ಥೆ ಇತ್ತು. ಆದರೆ ಈಗ ರಿಯಾಯಿತಿ ನೀಡುವ ಅವಧಿಯನ್ನು ವಿಸ್ತರಿಸಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ಹಾಗೆಯೇ ಜು.13ರಂದು ಹೊನ್ನಾಳಿ ನ್ಯಾಯಾಯದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷೀದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀನಿವಾಸ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ ಮುಂತಾದವರು ಮಾತನಾಡಿದರು. ವಕೀಲ ಚಂದ್ರಪ್ಪ ಮಡಿವಾಳ ಸ್ವಾಗತಿಸಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶೆ ಪದ್ಮಶ್ರೀ ಮನ್ನೋಳಿ, ಹೊನ್ನಾಳಿ, ಜೆ.ಎಂ. ಎಪ್.ಸಿ ನ್ಯಾಯಾಲಯದ ನ್ಯಾ. ಎಚ್.ದೇವದಾಸ್ , ಹೆಚ್ಚುವರಿ ನ್ಯಾ. ಪುಣ್ಯಕೋಟಿ, ಸರ್ಕಾರಿ ಸಹಾಯಕ ಅಭಿಯೋಜಕರಾದ ಭರತ್ ಭೀಮಯ್ಯ, ವಕೀಲರ ಸಂಘದ ಪದಾಧಿಕಾರಿಗಳು ಹೊನ್ನಾಳಿ ಸಿ.ಪಿ.ಐ., ಅನಿಲ್ ಕುಮಾರ್ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.