ಕೋಣನಹಳ್ಳಿ, ಬೂದನೂರು ಕೆರೆಗಳ ಅಭಿವೃದ್ಧಿ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Sep 25, 2024, 12:53 AM IST
೨೪ಕೆಎಂಎನ್‌ಡಿ-೧ಮಂಡ್ಯ ತಾಲೂಕಿನ ಬೂದನೂರು ಕೆರೆ ಅಭಿವೃದ್ಧಿ ಸಂಬಂಧ ಶಾಸಕ ಪಿ.ರವಿಕುಮಾರ್ ಜಿಲ್ಲಾಧಿಕಾರಿ ಡಾ.ಕುಮಾರ ಅವರೊಂದಿಗೆ ವೀಕ್ಷಣೆ ನಡೆಸಿದರು. | Kannada Prabha

ಸಾರಾಂಶ

ಕೆರೆಯ ಏರಿ ಮೇಲೆ ವಾಯು ವಿಹಾರ ನಡೆಸಲು ವಾಕಿಂಗ್ ಪಾಥ್, ಮಧ್ಯದಲ್ಲಿ ನಡುಗಡ್ಡೆ ನಿರ್ಮಾಣ, ಕೆರೆಯಲ್ಲಿ ತುಂಬಿರುವ ಹೂಳು, ಕಳೆ ತೆಗೆದು ಸ್ವಚ್ಛಗೊಳಿಸುವುದರ ಜೊತೆಗೆ ನೀರು ಸೋರಿಕೆಯಾಗದಂತೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕಲ್ಲಹಳ್ಳಿ-ಕೋಣನಹಳ್ಳಿ ಹಾಗೂ ಬೂದನೂರು ಕೆರೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಬೋಟಿಂಗ್ ಪಾಯಿಂಟ್ ಮತ್ತು ಜಲಕ್ರೆಡೆಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಕೋಣನಹಳ್ಳಿ ಮತ್ತು ಬೂದನೂರು ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೋಣನಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ೨.೫೦ ಕೋಟಿ ರು., ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ೧.೫೦ ಕೋಟಿ ರು. ಸೇರಿದಂತೆ ಒಟ್ಟಾರೆ ೪ ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೆರೆಯ ಏರಿ ಮೇಲೆ ವಾಯು ವಿಹಾರ ನಡೆಸಲು ವಾಕಿಂಗ್ ಪಾಥ್, ಮಧ್ಯದಲ್ಲಿ ನಡುಗಡ್ಡೆ ನಿರ್ಮಾಣ, ಕೆರೆಯಲ್ಲಿ ತುಂಬಿರುವ ಹೂಳು, ಕಳೆ ತೆಗೆದು ಸ್ವಚ್ಛಗೊಳಿಸುವುದರ ಜೊತೆಗೆ ನೀರು ಸೋರಿಕೆಯಾಗದಂತೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ ಎಂದರು.

ಕೆರೆ ಏರಿ ಮೇಲೆ ವಾಕಿಂಗ್ ಪಾಥ್ ನಿರ್ಮಾಣ ಮಾಡುವುದರಿಂದ ಒಲಂಪಿಕ್ ಕ್ರೀಡಾಪಟುಗಳಿಗೆ ಅನುಕೂಲವಾಗುವುದರ ಜೊತೆಗೆ ಜನಸಾಮಾನ್ಯರು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ವಾಯು ವಿಹಾರ ನಡೆಸಲು ಅನುಕೂಲವಾಗುತ್ತದೆ ಎಂದರು.

ಮೇಲುಕೋಟೆ ರಸ್ತೆಯ ಶಂಕರಪುರಕ್ಕೆ ಹೊಂದಿಕೊಂಡಿರುವ ಸಂತೆಮಾಳದಲ್ಲಿ ಸಂತೆ ನಡೆಯುತ್ತಿಲ್ಲ. ಆ ಸ್ಥಳವನ್ನು ಉಪಯೋಗಿಸಿಕೊಂಡು ಮಕ್ಕಳ ಆಟಿಕೆಗಳು ಇತರೆ ಕ್ರೀಡಾ ಚಟುವಟಿಕೆ ನಿರ್ಮಿಸುವುದರ ಜೊತೆಗೆ ಫುಡ್ ಕೋರ್ಟ್ ನಿರ್ಮಿಸಿ ಭಾನುವಾರ ಮತ್ತು ರಜಾ ದಿನಗಳಂದು ಪ್ರವಾಸಿ ತಾಣವಾಗಿಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.

ತಾಲೂಕಿನ ಬೂದನೂರು ಗ್ರಾಮದಲ್ಲಿರುವ ಶ್ರೀಅನಂತಪದ್ಮನಾಭಸ್ವಾಮಿ ದೇವಾಲಯ ಮತ್ತು ಶ್ರೀಕಾಶಿ ವಿಶ್ವನಾಥ ದೇವಾಲಯಗಳ ಅಭಿವೃದ್ಧಿ ಮಾಡಿ ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರವಾಸಿಗರನ್ನು ಸೆಳೆಯಲು ಬೂದನೂರು ಕೆರೆಯನ್ನು ಪ್ರವಾಸೀ ತಾಣವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ಕೆರೆ ಅಭಿವೃದ್ಧಿಗೆ ೪.೫೦ ಕೋಟಿ ರು. ಮಂಜೂರಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕೆರೆ ಏರಿ ಮೇಲೆ ವಾಕಿಂಗ್ ಪಾಥ್, ನಡುಗಡ್ಡೆ ಅಭಿವೃದ್ಧಿ, ನೀರು ಸೋರಿಕೆ ತಡೆ ಮತ್ತಿತರರು ಅಭಿವೃದ್ಧಿ ಕೆಲಸ ಮಾಡುವುದರ ಜೊತೆಗೆ ಜಲಕ್ರೀಡೆ, ಬೋಟಿಂಗ್ ನಡೆಸಲು ಕ್ರಮ ವಹಿಸಲಾಗುವುದು ಎಂದರು.

ಗುತ್ತಲು ಕೆರೆ ಅಭಿವೃದ್ಧಿಗೆ ೭.೫೦ ಕೋಟಿ ರು. ಹಣ ಮಂಜೂರಾಗಿದ್ದು, ಅಲ್ಲಿ ಜಲಕ್ರೀಡೆಗೆ ನಡೆಸಲು ಸಾಧ್ಯವಿಲ್ಲ. ಈಗಾಗಲೇ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಿಸಲು ಕಾರ್ಯ ಯೋಜನೆ ಸಿದ್ಧಪಡಿಸಲಾಗಿದೆ. ಹಾಗಾಗಿ ಅದನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಲಾಗುವುದು ಎಂದರು.

ತಾಲೂಕಿನ ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕೆರೆ ಅಭಿವೃದ್ಧಿಗೂ ೪.೫೦ ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಾಕಾರಿ ಶಿವಮೂರ್ತಿ, ಗ್ರಾಮದ ಮುಖಂಡರಾದ ಶೇಖರ್, ಚಂದ್ರಶೇಖರ್, ಅಂಕೇಶ್, ಚಂದ್ರಣ್ಣ, ಮಧುಕುಮಾರ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!