ಕನ್ನಡಪ್ರಭ ವಾರ್ತೆ ಬಾದಾಮಿ
ಸಿರಿಗಂಧ ಸಂಸ್ಕೃತಿ ಬಳಗವು ಯುವ ಸಾಹಿತಿಗಳನ್ನು ಬೆಳೆಸುವುದರ ಜತೆಗೆ, ಸಾಹಿತ್ಯಿಕ ಪರಿಸರವನ್ನು ಬೆಳೆಸುತ್ತಿದೆ. ಬಳಗದ ಕಾರ್ಯ ಅನುಕರಣೀಯ ಎಂದು ಸಿರಿಗಂಧ ಬಳಗದ ಗೌರವ ಅಧ್ಯಕ್ಷ ಡಾ.ಡಿ.ಎಂ.ಪೈಲ್ ಹೇಳಿದರು.ಸಿರಿಗಂಧ ಸಂಸ್ಕೃತಿ ಬಳಗ, ರವಿಕಿರಣ ಪ್ರಕಾಶನ ಮತ್ತು ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಎಸ್.ಬಿ.ಎಂ. ಪದವಿ ಮಹಾವಿದ್ಯಾಲಯದ ಭಾಷಾ ಸಂಗಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಜೆ.ದಾಜೀಬಾ ಅವರ ನನ್ನದಲ್ಲದ ಬದುಕು ಕವನ ಸಂಕಲನ ಮತ್ತು ಸುರೇಶ ಅರಳಿಮರ ಅವರ ಸೂರ್ಯ ನಡೆ ಚುಟುಕು ಸಂಕಲನ ಕೃತಿಗಳ ಲೋಕಾರ್ಪಣೆ ಮತ್ತು ಅವಲೋಕನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತಿಗಳಿಗೆ ಸಮಾಜದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಸಾಹಿತಿಗಳು ತಮ್ಮ ಸುತ್ತಲಿನ ಘಟನೆಗಳಿಗೆ ತೀವ್ರವಾಗಿ ಸ್ಪಂದಿಸುತ್ತ ಸಮಾಜದ ಓರೆ ಕೋರೆಗಳನ್ನು ಕಥೆ, ಕವನ, ಕಾದಂಬರಿಗಳಂತಹ ಕೃತಿಗಳ ಮೂಲಕ ತಿದ್ದುವ ಮಹತ್ತರ ಕೆಲಸ ಮಾಡುತ್ತಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಫ್.ಹೊರಕೇರಿ ಕೃತಿಗಳನ್ನು ಅನಾವರಣ ಮಾಡಿ, ನಮ್ಮ ನಾಡಿನಲ್ಲಿ ಅನೇಕ ಯುವ ಸಾಹಿತಿಗಳು ಇದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆಗಳು ಬೇಕಾಗಿವೆ. ಸಿರಿಗಂಧ ಸಂಸ್ಕೃತಿ ಬಳಗವು ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.ಮುಳಗುಂದದ ಆರ್.ಎನ್.ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ರಮೇಶ ಕಲ್ಲನಗೌಡರ ನನ್ನದಲ್ಲದ ಬದುಕು ಕವನ ಸಂಕಲನದ ಅವಲೋಕನ ಮಾಡಿದರು. ವಿಶಾಲವಾದ ಸಂಗತಿಗಳನ್ನು ಸಂಕ್ಷಿಪ್ತವಾಗಿ ಹೇಳುವ ಶಕ್ತಿ ಕವನಕ್ಕಿದೆ. ಷಡಕ್ಷರ ದೇವ ಹೇಳಿದಂತೆ ಕಾವ್ಯ ದೇವತೆ ಎಲ್ಲರಿಗೂ ಒಲಿಯುವುದಿಲ್ಲ. ಜನಸಾಮಾನ್ಯರಿಗೆ ಕಾಣದ ವಿಶಿಷ್ಟ ದೃಷ್ಟಿ ಕವಿಗಿದೆ. ಕವಿ ಮೂರನೇ ಸೃಷ್ಟಿಕರ್ತ. ಈ ಕವನ ಸಂಕಲನದಲ್ಲಿಯ ಕವನಗಳು ಸಹಜತೆ, ಸಂಕೀರ್ಣತೆ, ವೈವಿಧ್ಯತೆ ಮತ್ತು ಧ್ವನಿ ಪೂರ್ಣತೆಯನ್ನು ಒಳಗೊಂಡಿವೆ. ಜೆ.ದಾಜೀಬಾ ಅವರ ಅರಳು ಮರಳು ವಯಸ್ಸಿನಲ್ಲಿ ಕಾವ್ಯ ಕೃಷಿ ಮರಳಿ ಅರಳುತ್ತಿದೆ ಎಂದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಅವರು ಸೂರ್ಯ ನಡೆ ಚುಟುಕು ಸಂಕಲನದ ಅವಲೋಕನ ಮಾಡಿ ಮಾತನಾಡಿ, ಸೂರ್ಯ ನಡೆ ಕೃತಿ ಚುಟುಕುಗಳಿಂದ ಕೂಡಿದ್ದರೂ, ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ. ಕೃತಿಯಲ್ಲಿ ದಾಂಪತ್ಯ, ಶೋಷಣೆ, ಬಂಡಾಯ, ಮಾನವ ಪ್ರೀತಿ, ಸಮಾಜದ ಕಳಕಳಿ ಬಗ್ಗೆ ಕವಿ ಸುರೇಶ ಅರಳಿಮರ ಚುಟುಕುಗಳನ್ನು ರಚಿಸಿದ್ದು, ಎಲ್ಲ ವರ್ಗದ ಜನರಿಗೆ ಇಷ್ಟವಾಗುತ್ತವೆ ಎಂದು ತಿಳಿಸಿದರು.ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಉಮಾದೇವಿ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಗದ ಅಧ್ಯಕ್ಷ ಜೆ.ದಾಜೀಬಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎ.ಭರಮಗೌಡರ ಸ್ವಾಗತಿಸಿದರು. ಜಯಶ್ರೀ ಆಲೂರ ಮತ್ತು ರೇಣುಕಾ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿವಾನಂದ ಪರಸಣ್ಣವರ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಎಸ್.ಮೂಲಿಮನಿ, ಎಸ್.ಎಂ.ಹಿರೇಮಠ, ಜಯಶ್ರೀ ಭಂಡಾರಿ, ವಿ.ಟಿ.ಪೂಜಾರ, ಎಸ್.ಎಸ್.ಮೂಲಿಮನಿ, ಅನಸೂಯ ಹೊಸಮನೆ, ಸುವರ್ಣ ಯಲಿಗಾರ ಸೇರಿದಂತೆ ಮುಂತಾದ ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು.