ಕನ್ನಡಪ್ರಭ ವಾರ್ತೆ, ದಾವಣಗೆರೆ
ಪಿಂಜಾರರಿಗೂ ನಮ್ಮ ಮನೆತನಕ್ಕೂ ಹಿಂದಿನಿಂದಲೂ ತುಂಬಾ ವಿಶ್ವಾಸವಿದ್ದು, ಈ ಸಂಬಂಧಕ್ಕೆ ಕಲ್ಲು ಹಾಕುವವರಿದ್ದರೂ ನಾವು ಅಂತಹವರಿಗೆ ಯಾವುದೇ ಆಸ್ಪದ ಕೊಡುವುದಿಲ್ಲ. ನಿಮ್ಮ ಯಾವುದೇ ಕೆಲಸವಾಗಬೇಕೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಲೋಕಸಭೆ 2024ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನದಾಫ್/ ಪಿಂಜಾರ ಸಮಾಜಕ್ಕೆ ಮನವಿ ಮಾಡಿದರು.ನಗರದ ನದಾಫ್ ಪಿಂಜಾರ ಸಮಾಜದ ಸೌಹಾರ್ದ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಪುರುಷ ಮತ್ತು ಮಹಿಳಾ ಘಟಕಗಳಿಗೆ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನದಾಫ್/ಪಿಂಜಾರ ಬಾಂಧವರು ಕಾಂಗ್ರೆಸ್ಸಿಗೆ ಬೆಂಬಲಿಸಿ, ಕೈ ಹಿಡಿಯಬೇಕು ಎಂದರು.
ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ನೀವು ಯಾವುದೇ ಕೆಲಸ ಆಗಬೇಕೆಂದರೆ ಬೆನ್ನು ಹತ್ತಿ, ಅದನ್ನು ಮಾಡಿಸಿಕೊಳ್ಳಬೇಕು. ಆಗುತ್ತದೆ ಬಿಡೆಂದು ಸುಮ್ಮನೆ ಕೂಡಬೇಡಿ. ಪಿಂಜಾರ/ನದಾಫ್ ಸಮಾಜದ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರ ನೀಡುತ್ತೇನೆ. ಮಡಿವಾಳ, ಬ್ರಾಹ್ಮಣ, ಲಿಂಗಾಯತ ಸೇರಿದಂತೆ ಹಲವಾರು ಸಮುದಾಯಗಳಿಗೆ ಹೊಸ ಬಡಾವಣೆಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಕಡಿಮೆ ದರಕ್ಕೆ ನಿವೇಶನ ನೀಡಲಾಗಿದೆ. ಪಿಂಜಾರ ಭವನಕ್ಕೆ ಇಮಾಂ ಹೋರಾಟ ಮಾಡಿದರು. ಪ್ರತಿ ಚದರ ಅಡಿಗೆ 21 ರು.ನಂತೆ ನಿವೇಶನ ನೀಡಿದ್ದು, ಮುಂದಿನ ದಿನಗಳಲ್ಲೂ ಭವನ ಸೇರಿದಂತೆ ಸಮಾಜದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಬೆಂಬಲ, ಸಹಕಾರ ಇದೆ ಎಂದು ಅವರು ಭರವಸೆ ನೀಡಿದರು.ಸಮಾಜದ ಮುಖಂಡರು ಪಿಂಜಾರ / ನದಾಫ್‌ರ ಅನೇಕ ಬೇಡಿಕೆ, ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದಾರೆ. ಸಮಾಜದ ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ ತಂಗಡಗಿ, ಡಾ.ಎಚ್.ಸಿ.ಮಹದೇವಪ್ಪನವರನ್ನು ಭೇಟಿ ಮಾಡಿ, ಅನುದಾನ ಒದಗಿಸುತ್ತೇವೆ. ಸಮಾಜದ ಮುಖಂಡರು ಬೆಂಗಳೂರಿಗೆ ಬಂದಲ್ಲಿ ಸಿಎಂ, ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿಸಿ, ನಿಮ್ಮ ಬೇಡಿಕೆ ಈಡೇರಿಸಲು, ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ.ನದಾಫ್ ಮಾತನಾಡಿ, ರಾಜ್ಯದಲ್ಲಿ ಸುಮಾರು 25-30 ಲಕ್ಷ ಜನಸಂಖ್ಯೆ ಸಮಾಜದ ನಮ್ಮದು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸರ್ಕಾರದ ಮಟ್ಟದಲ್ಲೂ ನಮ್ಮ ಬೇಡಿಕೆ ಕಾರ್ಯ ರೂಪಕ್ಕೆ ಬರುತ್ತಿಲ್ಲ. ಸಮುದಾಯದವರಿಗೆ ಪ್ರವರ್ಗ-1ರ ಪ್ರಮಾಣಪತ್ರ ನೀಡಲು ತಹಸೀಲ್ದಾರರು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸಚಿವರು ತಹಸೀಲ್ದಾರರಿಗೆ ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.ರಾಜ್ಯದಲ್ಲಿ ಪಿಂಜಾರ / ನದಾಫ್ ಅಭಿವೃದ್ಧಿ ನಿಗಮ ಕೇವಲ ಪತ್ರದಲ್ಲಷ್ಟೇ ಇದ್ದು, ಅದಕ್ಕೆ ಅನುದಾನ ಒದಗಿಸುವ ಮೂಲಕ ಕಾರ್ಯಾರಂಭ ಮಾಡಬೇಕು. ನಿಗಮ ಕ್ಕೆ ಅಧ್ಯಕ್ಷರನ್ನು ನೇಮಿಸಿ, ಸೌಲಭ್ಯ ನೀಡಬೇಕು. ನಾವು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಬರುವುದರಿಂದ ಎರಡೂ ಇಲಾಖೆಗಳಲ್ಲೂ ವಿನಾ ಕಾರಣ ನಮ್ಮ ಸಮುದಾಯದವರನ್ನು ಅಲೆದಾಡಿಸಲಾಗುತ್ತದೆ. ಯಾವುದಾದರೂ ಒಂದು ವರ್ಗಕ್ಕೆ ನಮ್ಮನ್ನು ಸೇರ್ಪಡೆ ಮಾಡಿ, ಮೀಸಲಾತಿ ಕಲ್ಪಿಸಬೇಕು. ನಮ್ಮ ಸಮಾಜದ ಮುಖಂಡರ ನಿಯೋಗವು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಬೆಂಗಳೂರಿನ ಭಾವೈಕ್ಯ ಗುರು ಪೀಠದ ಧರ್ಮಗುರು ಸಂಗಮಪೀರ್ ಚಿಸ್ತಿ ಸಾನಿಧ್ಯ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಜಗಳೂ ರು ಬಿ.ದೇವೇಂದ್ರಪ್ಪ, ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ನಿವೃತ್ತ ಪ್ರಾಂಶುಪಾಲ ಇಮಾಂ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೆ, ಸಂಘಟನಾ ಕಾರ್ಯದರ್ಶಿ ಚಮನ್ ಫರ್ಜಾನ್, ಕವಯಿತ್ರಿ ಜೆ.ಬಿ.ನೂರ ಜಹಾನ್ ಬೇಗಂ, ಬಿ.ದಾದಾಪೀರ್, ಡಿ.ಬಿ.ಹಸನ್ ಪೀರ್, ಬಿ.ದಾದಾಪೀರ್, ಡಿ.ಖಾದರ್ ಬಾಷ, ಹುಸೇನ್ ಮಿಯಾ, ಟಿಪ್ಪು ಸುಲ್ತಾನ್ ಇತರರು ಇದ್ದರು.