ರಾಯಣ್ಣ ಬಂಟರ ಸಮಾಧಿ ಸ್ಥಳಗಳ ಅಭಿವೃದ್ಧಿ

KannadaprabhaNewsNetwork |  
Published : Jan 20, 2026, 03:15 AM IST
ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ, ರಾಯಣ್ಣನ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಸೇರಿ ಒಟ್ಟು ಏಳು ಜನರನ್ನು ನಂದಗಡದಲ್ಲಿ ನೇಣಿಗೆ ಹಾಕಲಾಗಿದೆ. ರಾಯಣ್ಣನ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಿದಂತೆ ಉಳಿದ ಆರು‌ ಹುತಾತ್ಮರ ಸಮಾಧಿ ಸ್ಥಳಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಸೇರಿ ಒಟ್ಟು ಏಳು ಜನರನ್ನು ನಂದಗಡದಲ್ಲಿ ನೇಣಿಗೆ ಹಾಕಲಾಗಿದೆ. ರಾಯಣ್ಣನ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಿದಂತೆ ಉಳಿದ ಆರು‌ ಹುತಾತ್ಮರ ಸಮಾಧಿ ಸ್ಥಳಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದರು.

ನಂದಗಡ ರೂರಲ್ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ, ಸಮಾಧಿ ಬಳಿಯ ಕೆರೆಯಲ್ಲಿ ಕ್ರಾಂತಿವೀರ ರಾಯಣ್ಣ ಪ್ರತಿಮೆ ಲೋಕಾರ್ಪಣೆಗೊಳಿಸಿ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಯಣ್ಣನ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ.‌ 2024ರಲ್ಲಿ ಸಂಗೊಳ್ಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆಯನ್ನು ಉದ್ಘಾಟಿಸಲಾಗಿದೆ. ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಹಾಗೂ ಅವರನ್ನು ನೇಣು ಹಾಕಿದ ನಂದಗಡ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ದೇಶಪ್ರೇಮಿಯಾಗಿದ್ದು, ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸಂಗೊಳ್ಳಿಯ ಸೈನಿಕ ಶಾಲೆಯಲ್ಲಿ 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಕಾರ್ಯವಾಗಬೇಕು ಎಂದ ಅವರು, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡಬೇಕು. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಹೋರಾಟದ ಬದುಕು ಹಾಗೂ ಅವರ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ ವೀರಭೂಮಿ ನಿರ್ಮಾಣಕ್ಕೆ 2013ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಕನಸು ನನಸಾಗಿದೆ. ನಂದಗಡ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರವಾಸಿ ತಾಣವಾಗುವುದರ ಜೊತೆಗೆ ರಾಯಣ್ಣನ ಇತಿಹಾಸ ದೇಶಕ್ಕೆ ತಿಳಿಸುವ ಕಾರ್ಯ ವೀರಭೂಮಿಯಲ್ಲಿ ಆಗಿದೆ ಎಂದರು.

ವೀರಭೂಮಿಯಿಂದಾಗಿ ಇವತ್ತಿನಿಂದ ಭಾರತದ ಭೂಪಟದಲ್ಲಿ ನಂದಗಡ ವಿಶೇಷ ಸ್ಥಾನ ಪಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ಅನೇಕ ಕಾಮಗಾರಿಗಳನ್ನು‌ ಕೈಗೊಳ್ಳಲಾಗಿದೆ. ಈ ಬಾರಿ ಖಾನಾಪುರ ತಾಲೂಕಿನಲ್ಲಿ ಮೂರು ಸೇತುವೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ರಾಯಣ್ಣನ ಇತಿಹಾಸ ಮೆಲುಕು ಹಾಕುವ ಉದ್ದೇಶದೊಂದಿಗೆ ಸಂಗೊಳ್ಳಿ ಹಾಗೂ ನಂದಗಡ ಗ್ರಾಮಗಳಲ್ಲಿ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಕಾರ್ಯ ನಮ್ಮ ಸರ್ಕಾರದಿಂದ ಆಗಿದೆ. ಮುಂದಿನ ದಿನಗಳಲ್ಲಿ ಕಿತ್ತೂರ ಚನ್ನಮ್ಮ‌ ಹಾಗೂ ಸಂಗೊಳ್ಳಿ ರಾಯಣ್ಣನ ಇತಿಹಾಸ ತಿಳಿದುಕೊಳ್ಳುವ ಕಾರ್ಯ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ ಎಂದು ಭರವಸೆ ನೀಡಿದರು.

ನಗರಾಭಿವೃದ್ಧಿ ಸಚಿವ ಭೈರತಿ ಎಸ್.ಸುರೇಶ್ ಮಾತನಾಡಿ, ನಂದಗಡದಲ್ಲಿ ವೀರಭೂಮಿ ನಿರ್ಮಾಣದಿಂದಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನು ನೆನಪಿಸಿಕೊಳ್ಳುವ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯದ ಅನುದಾನ ಹಾಗೂ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿದರು. ಪ್ರತಿ ಭಾನುವಾರ ಹಾಗೂ ಶನಿವಾರ ಬೆಳಗಾವಿಯಿಂದ ನಂದಗಡಗೆ ವಿಶೇಷ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಅಧ್ಯಕ್ಷತೆ‌‌ ವಹಿಸಿದ್ದ ಶಾಸಕ ವಿಠ್ಠಲ್ ಹಲಗೇಕರ ಮಾತನಾಡಿ, ಖಾನಾಪುರ ತಾಲೂಕಿನಲ್ಲಿ ನಂದಗಡ ಪವಿತ್ರ ಭೂಮಿಯಾಗಿದೆ. ಸಂಗೊಳ್ಳಿ ರಾಯಣ್ಣನವರ ಪ್ರತಿಮೆ‌ ಹಾಗೂ ವೀರಭೂಮಿ‌ ಲೋಕಾರ್ಪಣೆಗೊಳಿಸಿರುವುದು ಹೆಮ್ಮೆಯ ಸಂಗತಿ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರವಾಗಿದೆ. ಖಾನಾಪುರ - ಕಿತ್ತೂರ ರಸ್ತೆ ಅಗಲೀಕರಣ, ಹಂಡಿಬಡಗನಾಥ ದೇವಸ್ಥಾನ ಅಭಿವೃದ್ಧಿ, ಪಿಆರ್‌ಡಿ ರಸ್ತೆ ಕಾಮಗಾರಿಗಳಿಗೆ ವಿಶೇಷ ಅನುದಾನ ಹಾಗೂ ಖಾನಾಪುರ ಮತಕ್ಷೇತ್ರಕ್ಕೆ ಇನ್ನೂ ಹೆಚ್ಚಿನ‌ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾಗಿನೆಲೆ ಕನಕ ಗುರುಪೀಠದ ಡಾ.ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಗಣೇಶ ಹುಕ್ಕೇರಿ, ಆಸೀಫ್ (ರಾಜು) ಸೇಠ್, ಬಾಬಸಾಹೇಬ ಪಾಟೀಲ, ಚನ್ನರಾಜ ಹಟ್ಟಿಹೊಳಿ ಮೊದಲಾದವರು ಉಪಸ್ಥಿತರಿದ್ದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಆರ್.ಶಾಲಿನಿ ವಂದಿಸಿದರು.

--------

ಕೋಟ್‌

ಸಂಗೊಳ್ಳಿ ಹಾಗೂ ನಂದಗಡವನ್ನು ಪ್ರವಾಸಿ ತಾಣವನ್ನಾಗಿಸುವ ಉದ್ದೇಶದೊಂದಿಗೆ ಈ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ವೀರಭೂಮಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಬದುಕು ಹಾಗೂ ಹೋರಾಟದ ವಿವಿಧ ಮಜಲುಗಳನ್ನು ಶಿಲ್ಪಕಲಾಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ. ಪ್ರತಿಯೊಬ್ಬರು ದೇಶಪ್ರೇಮ‌ ಬೆಳೆಸಿಕೊಂಡು‌ ಸಂವಿಧಾನವನ್ನು ರಕ್ಷಿಸಬೇಕಿದೆ.‌ ಶಿಕ್ಷಣದಿಂದ ಸಮಾನ ಅವಕಾಶ ಸಾಧ್ಯ. ಆದ್ದರಿಂದ ಶಿಕ್ಷಣ, ಸ್ವಾಭಿಮಾನ ಮತ್ತು ಜ್ಞಾನ ನಮ್ಮೆಲ್ಲರ ಅಭಿವೃದ್ಧಿಗೆ ಸಹಕಾರಿ.‌ ಗುಲಾಮಗಿರಿತನ ಕಿತ್ತೆಸೆಯಬೇಕಾಗಿದೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

-----------

ಬಾಕ್ಸ್‌.......

ವೇದಿಕೆ ಮೇಲೆ ತೀವ್ರ ಗೊಂದಲ

ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಕ್ಷಣಕಾಲ ಗೊಂದಲ ಉಂಟಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದ ಬಳಿಕ, ಕಾರ್ಯಕರ್ತನನ್ನು ವೇದಿಕೆ ಮೇಲೆ ಕರೆಯುವ ವಿಚಾರಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಕಾಂಗ್ರೆಸ್ ಯುವ ಘಟಕದ ತಾಲೂಕಾಧ್ಯಕ್ಷ ಇರ್ಫಾನ್ ತಾಳಿಕೋಟಿಯನ್ನು ವೇದಿಕೆ ಮೇಲೆ ಬರುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನಿಸಿದರು. ಇದಕ್ಕೆ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವೇದಿಕೆ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಿತಿಗತಿಯ ತೀವ್ರತೆಯನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು ಮಧ್ಯಪ್ರವೇಶಿಸಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಸಮಾಧಾನಪಡಿಸಿದ ಬಳಿಕ ವಿವಾದ ಶಮನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ