ಪ್ರವಾಸಿ ತಾಣವಾಗಿ ಶಿವಪುರ ಧ್ವಜಸತ್ಯಾಗ್ರಹ ಸೌಧ ಅಭಿವೃದ್ಧಿ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Nov 24, 2026, 12:45 AM IST
23ಕೆಎಂಎನ್ ಡಿ11 | Kannada Prabha

ಸಾರಾಂಶ

ಸೌಧದ ಅಭಿವೃದ್ಧಿಗೆ ಲಭ್ಯವಾಗುವ ಅನುದಾನವನ್ನು ಆದ್ಯತೆಗನುಗುಣವಾಗಿ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸೌಧದ ಆವರಣದಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸುವ ಜತೆಗೆ ಮಕ್ಕಳ ಮತ್ತು ಯುವಜನರ ಆಸಕ್ತಿಗೆ ಪೂರಕವಾದ ಜ್ಞಾನವರ್ಧಕ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ರೂಪಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶ ಪ್ರೇಮದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸಮೀಪದ ಶಿವಪುರ ಧ್ವಜಸತ್ಯಾಗ್ರಹ ಸೌಧವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ. ಉದಯ ತಿಳಿಸಿದರು.

ಧ್ವಜಸತ್ಯಾಗ್ರಹ ಸೌಧದ ಆವರಣದಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಧ್ವಜ ಸತ್ಯಾಗ್ರಹ ಸೌಧ ಪ್ರತಿಷ್ಠಾನ ಸ್ಥಾಪನೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿ, ಧ್ವಜಸತ್ಯಾಗ್ರಹ ಸೌಧ ಕೇವಲ ಐತಿಹಾಸಿಕ ಸ್ಮಾರಕವಾಗಿ ಉಳಿಯದೆ, ಸ್ವಾತಂತ್ರ‍್ಯ ಹೋರಾಟದ ಮಹತ್ವವನ್ನು ಯುವ ಜನರಲ್ಲಿ ಬಿತ್ತುವ ಜ್ಞಾನ ಕೇಂದ್ರವಾಗಿ ರೂಪುಗೊಳ್ಳಬೇಕಿದೆ ಎಂದರು.

ಸೌಧದ ಅಭಿವೃದ್ಧಿಗೆ ಲಭ್ಯವಾಗುವ ಅನುದಾನವನ್ನು ಆದ್ಯತೆಗನುಗುಣವಾಗಿ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸೌಧದ ಆವರಣದಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಅಗತ್ಯ ಅನುಕೂಲಗಳನ್ನು ಕಲ್ಪಿಸುವ ಜತೆಗೆ ಮಕ್ಕಳ ಮತ್ತು ಯುವಜನರ ಆಸಕ್ತಿಗೆ ಪೂರಕವಾದ ಜ್ಞಾನವರ್ಧಕ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ರೂಪಿಸಬೇಕು ಎಂದರು.

ಮಕ್ಕಳಿಗೆ ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ನು ಕೇವಲ ಪಠ್ಯಪುಸ್ತಕಗಳ ಮೂಲಕವಷ್ಟೇ ಅಲ್ಲದೇ, ದೃಶ್ಯಮಾಧ್ಯಮ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಪರಿಚಯಿಸಬೇಕು. ಇದರಿಂದ ಹೋರಾಟಗಾರರ ಕೊಡುಗೆ, ತ್ಯಾಗ ಮತ್ತು ದೇಶಪ್ರೇಮದ ಮೌಲ್ಯಗಳು ಹೊಸ ತಲೆಮಾರಿನಲ್ಲಿ ಬೇರೂರಲು ಸಾಧ್ಯವಾಗಲಿದೆ ಎಂದರು.

ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಹೈಟೆಕ್ ಕ್ಯಾಂಟೀನ್ ಮತ್ತು ಆಹಾರ ಸೇವನಾ ಕೊಠಡಿ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು ಎಂದರು.

ಡೀಸಿ ಡಾ.ಕುಮಾರ ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಅಚಲ ದೇಶಪ್ರೇಮದ ಸಂಕೇತವಾದ ಶಿವಪುರ ಧ್ವಜಸತ್ಯಾಗ್ರಹ ಸೌಧದ ಐತಿಹಾಸಿಕ ಮಹತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಮತ್ತು ನವೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರು. ಅನುದಾನ ಒದಗಿಸುವ ಮೂಲಕ ಸೌಧದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸೌಧದಲ್ಲಿ ಡೇಟಾ ಎಂಟ್ರಿ ಕಾರ್ಯನಿರ್ವಹಣೆ, ಎರಡು ವರ್ಷಗಳ ವಿದ್ಯುತ್ ಬಿಲ್ ಪಾವತಿ ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಪ್ರೊಜೆಕ್ಟರ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಮೂಲಕ ಸ್ವಾತಂತ್ರ‍್ಯ ಹೋರಾಟಗಾರರ ಜೀವನ, ಹೋರಾಟ ಹಾಗೂ ಐತಿಹಾಸಿಕ ಘಟನೆಗಳ ದೃಶ್ಯಾವಳಿಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಈ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೌಧದ ನಿರಂತರ ನಿರ್ವಹಣೆ, ಸ್ವಚ್ಛತೆ ಹಾಗೂ ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಭದ್ರತಾ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಹಾಗೂ ಗುಮಾಸ್ತರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ರೂಪಿಸಲಾಗುವುದು ಎಂದರು.

ಮಂಡ್ಯ ಜಿಲ್ಲೆಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆಧ್ವಜಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಲು ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿನ ಐತಿಹಾಸಿಕ ಹಿನ್ನೆಲೆ, ಸ್ವಾತಂತ್ರ‍್ಯ ಹೋರಾಟದ ಮಹತ್ವ ಹಾಗೂ ಹೋರಾಟಗಾರರ ಕೊಡುಗೆಗಳ ಕುರಿತು ಮಾಹಿತಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಿಲ್ಲಾ ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ನಗರಸಭೆ ಆಯುಕ್ತೆ ರಾಧಿಕಾ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ಅಭಿವೃದ್ಧಿ ಸಮಿತಿ ಸದಸ್ಯರಾದ ಜಯಪ್ರಕಾಶ್ ಗೌಡ, ತೈಲೂರು ವೆಂಕಟಕೃಷ್ಣ, ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಸಿ.ಅಪೂರ್ವಚಂದ್ರ, ಸಿಪಾಯಿ ಶ್ರೀನಿವಾಸ್, ವಿ.ಹರ್ಷ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಗಳಾದ ರಾಜೇಶ್, ಕೆ.ಎಂ.ದೇವಾನಂದ್, ಪುರುಷೋತ್ತಮ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?