ಕನ್ನಡಪ್ರಭ ವಾರ್ತೆ ಬೇಲೂರುಬೇಲೂರು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಮೂಡಿಗೆರೆ ಮಾರ್ಗವಾಗಿ ತತ್ಕೊಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಹಲವು ವಿಘ್ನಗಳು ಎದುರಾಗುತ್ತಿದ್ದು, ಗಾಯದ ಮೇಲೆ ಬರೆ ಎಂಬಂತೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಸ್ಥಳಾಂತರ ಕಾರ್ಯಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವುದು ಅರಣ್ಯ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಅರಣ್ಯ ಅಧಿಕಾರಿಗಳು ಬೇಲೂರು ಭಾಗದ ಕಾಡಾನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಜಿಲ್ಲೆಯತ್ತ ಓಡಿಸುತ್ತಿದ್ದು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಶೃಂಗೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಶಾಸಕರು ಎಚ್ಚರಿಕೆ ನೀಡುವುದರ ಜೊತೆಗೆ ಆನೆಗಳನ್ನು ಭದ್ರಾ ಅರಣ್ಯ ಪ್ರದೇಶಕ್ಕೆ ಓಡಿಸುವುದನ್ನು ನಿಲ್ಲಿಸದಿದ್ದರೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ‘ಅತ್ತ ದರಿ ಇತ್ತಪುಲಿ’ ಎಂಬ ಸ್ಥಿತಿಯಲ್ಲಿದ್ದು ಆನೆಗಳನ್ನು ಈಗ ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ಗೊಂದಲದಲ್ಲಿದ್ದಾರೆ. 54 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವುದಾಗಿ ಅರಣ್ಯ ಇಲಾಖೆ ತಿಳಿಸಿತ್ತು. ಆದರೆ, ಬೇರೆ ಜಿಲ್ಲೆಯ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸಬಾರದೆಂದು ಅರಣ್ಯ ಸಚಿವರಿಗೆ ಪತ್ರ ಬರೆದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗಿತ್ತು. ಆದರೂ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ಶನಿವಾರ ದಿಂದಲೇ ಆನೆಗಳನ್ನು ಮೂಡಿಗೆರೆ ಭಾಗಕ್ಕೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆ ಭಾಗದ ಮೂರು ಶಾಸಕರು ದೂರುತ್ತಿದ್ದಾರೆ. ಈ ಬಗ್ಗೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ, ಬಳ್ಳೂರು ಸ್ವಾಮಿಗೌಡ ಕಾಫಿ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷ ಅದ್ಧೂರಿ ಕುಮಾರ್, ಕೆಆರ್‌ಎಸ್ ಪಕ್ಷದ ಆದೇಶ್ ಮಾತನಾಡಿ ಆನೆ ಸ್ಥಳಾಂತರ ವಿಷಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂರು ಶಾಸಕರು ರಾಜಕೀಯ ಮಾಡುವುದ ಸರಯಲ್ಲ. ಸಹಿ ಮಾಡದೆ ಇರುವ ರಾಜೀನಾಮೆ ಪತ್ರವನ್ನು ಹಿಡಿದು ಹೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರೈತರು ಬೆಳೆಗಾರರು ಕೂಡ ನಮ್ಮ ಅಣ್ಣತಮ್ಮಂದಿಗಳಾಗಿದ್ದು ಅವರ ಕಷ್ಟ ನಮಗೂ ಗೊತ್ತಿದೆ. ಮೂರು ಜನ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಿ ರೈಲ್ವೆ ಬ್ಯಾರಿಕೆಡ್ ಅಥವಾ ಸೋಲಾರ್ ತಂತಿ ಹಾಕಿಸುವ ಪ್ರಯತ್ನ ಮಾಡಲಿ. ಅದು ಬಿಟ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ತಡೆಒಡ್ಡುವ ಪ್ರಯತ್ನ ಸರಿಯಲ್ಲ. ಈಗಲೂ ಈ ಭಾಗದ ಎಲ್ಲಾ ಮುಖಂಡರನ್ನು ಶಾಸಕರನ್ನು ಸೇರಿದಂತೆ ಸೌಹಾರ್ದ ಯುತ ಸಭೆ ಕರೆದು ಒಮ್ಮತದ ನಿರ್ಣಯಕ್ಕೆ ಬರಲಿ ಎಂದು ಆಗ್ರಹಿಸಿದ್ದಾರೆ.ಶಾಸಕ ಎಚ್. ಕೆ. ಸುರೇಶ್ ಮಾತನಾಡಿ, ಮೂರು ಭಾಗಗಳಲ್ಲಿರುವ ಸಮಸ್ಯೆಗಳನ್ನು ಅಧಿಕಾರಿಗಳು ಸಮಗ್ರವಾಗಿ ಅರ್ಥಮಾಡಿಕೊಂಡು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು . ಅರಣ್ಯ ಸಚಿವರು ಇದೇ 25ರಂದು ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಸಕಲೇಶಪುರ ಹಾಗೂ ಬೇಲೂರು ಶಾಸಕರ ಸಭೆ ಕರೆದಿದ್ದು, ಅಲ್ಲಿ ಸಮಸ್ಯೆ ಕುರಿತು ಚರ್ಚಿಸಲಾಗುವುದು. ಈಗಿರುವ ಆನೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸುವುದಷ್ಟೇ ಪರಿಹಾರವಲ್ಲ. ಅವು ಮತ್ತೆ ಹಿಂದಿರುಗದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಬೇಕು . ಈಗಾಗಲೇ ಆನೆಗಳು ಮೂಡಿಗೆರೆ ವ್ಯಾಪ್ತಿಯ ತತ್ಕೊಳ ಅರಣ್ಯ ಪ್ರದೇಶದಲ್ಲಿವೆ. ನಾಲ್ಕೈದು ದಿನಗಳಲ್ಲಿ ಭದ್ರಾ ಅಭಯಾರಣ್ಯಕ್ಕೆ ಕಳುಹಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.