ಕನ್ನಡಪ್ರಭ ವಾರ್ತೆ ಕುಶಾಲನಗರಸ್ಥಳೀಯ ಸಹಕಾರ ಸಂಘಗಳ ಮೂಲಕ ಪ್ರತಿಯೊಬ್ಬ ಸದಸ್ಯರ ಏಳಿಗೆಯ ಜೊತೆಗೆ ಸಮಾಜದ ನಿರಂತರ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಶಾಲನಗರದಲ್ಲಿ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ವ್ಯಕ್ತಿ ಅಭಿವೃದ್ಧಿ ಮೂಲಕ ಕುಟುಂಬಗಳ ಆರ್ಥಿಕ ಸಮೃದ್ಧಿ ಸಾಧ್ಯ ಎಂದ ಶ್ರೀಗಳು, ಪ್ರತಿಯೊಬ್ಬರೂ ಸೋಮಾರಿತನ ಬಿಟ್ಟು ಕೌಶಲ್ಯಾಧಾರಿತರಾಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಮುಂದಿನ ದಿನಗಳಲ್ಲಿ ಎಲ್ಲೆಡೆ ನಡೆಯಲಿರುವ ಜನಗಣತಿ ಕಾರ್ಯ ಸಂದರ್ಭ ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಮಾಹಿತಿ ನೀಡಬೇಕು. ಆ ಮೂಲಕ ಸಮಾಜದ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಸ್ತವ ವಿಚಾರವನ್ನು ನೀಡಬೇಕಾಗಿದೆ ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ತಮ್ಮ ಮೂಲಕ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿ ಶುಭಕೋರಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ದೂರ ದೃಷ್ಟಿಯ ಚಿಂತನೆ ಜೊತೆಗೆ ಉತ್ತಮ ಬುನಾದಿ ಹೊಂದಿದೆ. ಪ್ರಾಮಾಣಿಕ ದಕ್ಷ ಆಡಳಿತ ಮಂಡಳಿಗಳ ಮೂಲಕ ಸಹಕಾರ ಸಂಘಗಳ ಏಳಿಗೆ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪವನ ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕೊಡಗು ಜಿಲ್ಲಾ ಕಾರ್ಯದರ್ಶಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು ಶುಭ ಕೋರಿದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹೆಚ್ ಎನ್ ರವೀಂದ್ರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಟಿ ಆರ್ ಶರವಣಕುಮಾರ್ ಮತ್ತು ಇತರರು ಮಾತನಾಡಿದರು. ನಾಡಪ್ರಭು ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ ಡಿ ರಂಗಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಏಳಿಗೆ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷರಾದ ಎಂ ಕೆ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಕಟ್ಟಡಕ್ಕೆ ನಿವೇಶನ ದಾನಿಗಳಾದ ಎಂ ಡಿ ನಾಗೇಶ್ ಮತ್ತು ಕುಟುಂಬಸ್ಥರನ್ನು ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಾಯಿತು.ಸಂಘದ ಉಪಾಧ್ಯಕ್ಷರಾದ ಜಿ ಬಿ ಜಗದೀಶ್, ನಿರ್ದೇಶಕರಾದ ಸಿ ವಿ ನಾಗೇಶ್, ಆಡಳಿತ ಮಂಡಳಿ ಹಾಗೂ ಸ್ಥಾಪಕ ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.