ಸಂವಿಧಾನ ಆಶಯಕ್ಕೆ ಬೆಲೆ ಸಿಕ್ಕರೆ ದೇಶದ ಅಭಿವೃದ್ಧಿ

KannadaprabhaNewsNetwork | Published : Aug 16, 2024 12:46 AM

ಸಾರಾಂಶ

ಸರ್ವರಿಗೂ ಸಮಾನತೆಯ ಅವಕಾಶ ಧಕ್ಕಲೆಂಬ ದೃಷ್ಟಿಯಿಂದ ಡಾ.ಬಿ.ಆರ್.ಅಂಭೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳಿಗೆ ಬೆಲೆ ಕೊಟ್ಟು ಮುನ್ನಡೆದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ

ಸರ್ವರಿಗೂ ಸಮಾನತೆಯ ಅವಕಾಶ ಧಕ್ಕಲೆಂಬ ದೃಷ್ಟಿಯಿಂದ ಡಾ.ಬಿ.ಆರ್.ಅಂಭೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳಿಗೆ ಬೆಲೆ ಕೊಟ್ಟು ಮುನ್ನಡೆದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ, ಸ್ವಜನ ಪಕ್ಷಪಾತ, ಆಡಳಿತದ ವ್ಯವಸ್ಥೆ ದಿಕ್ಕು ತಪ್ಪುತ್ತಿರುವ ಪರಿಣಾಮ ದೇಶದ ಅಭಿವೃದ್ಧಿಯೂ ಹಾದಿ ತಪ್ಪುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ತಾನು ಮಾತ್ರ ಉದ್ಧಾರವಾಗದೇ, ತನ್ನ ದೇಶವೂ ಸಹ ಉದ್ಧಾರವಾಗಬೇಕೆಂಬ ಮನೋಭಾವ ರೂಢಿಸಿಕೊಳ್ಳಬೇಕು. ಅನೇಕ ಮಹಾನ್ ವ್ಯಕ್ತಿಗಳ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ. ನಾವು ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡಾಗ ಮಾತ್ರ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದರು.

ತಹಸೀಲ್ದಾರ್ ನರೇಂದ್ರಕುಮಾರ್ ಮಾತನಾಡಿ, ದೇಶದ ಭದ್ರತೆ ಹಾಗೂ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಯುವಶಕ್ತಿ ದೇಶಭಕ್ತಿಯನ್ನು ಬೆಳೆಸಿಕೊಂಡು ದುಡಿಯುವ ಮೂಲಕ ಹಿರಿಯರು ನಮಗೆ ನೀಡಿರುವ ಸ್ವಾತಂತ್ರ‍್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ. ಬ್ರಿಟೀಷರ ಸಂಕೋಲೆಯಿಂದ ದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಅನೇಕ ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರೆಲ್ಲರ ನಿರಂತರ ಸ್ಮರಣೆ ಅಗತ್ಯ ಎಂದರು.

ಹಲವಾರು ಮಹನೀಯರ ಹೋರಾಟ, ತ್ಯಾಗ, ಬಲಿದಾನದ ಪರಿಣಾಮವಾಗಿ ಸ್ವಾತಂತ್ರ ಲಭಿಸಿದೆ, ದೇಶದಲ್ಲಿ ಆಡಳಿತ ಮಾಡುತ್ತಿರುವವರು ದೇಶದ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಮೂಲಕ ಬೇರೊಬ್ಬರ ಕಪಿಮುಷ್ಟಿಗೆ ದೇಶದ ವ್ಯವಸ್ಥೆಯನ್ನು ಕೊಡುತ್ತಿರುವುದು ವಿಷಾದನೀಯ. ದೇಶದ ಅಭಿವೃದ್ಧಿಗಿಂತ ವೈಯುಕ್ತಿಕ ಅಭಿವೃದ್ಧಿಯೇ ಹೆಚ್ಚಾಗುತ್ತಿರುವ ಕಾರಣ ಸಂವಿಧಾನದ ಅಡಿಯಲ್ಲಿ ಬದುಕುವವರಿಗೆ ಸಮಾನತೆಯೇ ಇಲ್ಲದಂತಾಗಿದೆ. ಸಂವಿಧಾನದ ಆಶಯಗಳಿಗೆ ಬೆಲೆ ಕೊಡಬೇಕಾದರೆ ದೇಶವನ್ನು ಉತ್ತಮ ಹಾದಿಯಲ್ಲಿ ನಡೆಸುವವರಿಗೆ ಅಧಿಕಾರದ ಚುಕ್ಕಾಣಿ ಕೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಬಿಇಒ ಪದ್ಮನಾಭ್, ಇಒ ನಾರಾಯಣಸ್ವಾಮಿ, ಡಿವೈಎಸ್ಪಿ ಅಣ್ಣಾಸಾಹೇಬ್ ಪಾಟೀಲ್, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜ್, ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಉದ್ಯಮಿ ಬಿ.ವಿ.ಭೈರೇಗೌಡ ಸೇರಿ ಹಲವಾರು ಗಣ್ಯರು ಹಾಜರಿದ್ದರು.

Share this article