ಮಕ್ಕಳಿಂದ ಮೊಳಗಿದ ಸಾಂಸ್ಕೃತಿಕ ಸಿರಿ ವೈಭವ

KannadaprabhaNewsNetwork | Published : Aug 16, 2024 12:46 AM

ಸಾರಾಂಶ

ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಳನ್ನು ಜನರಿಗೆ ಮತ್ತೊಮ್ಮೆ ಕಟ್ಟಿಕೊಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಕಲ್ಪನೆಯಲ್ಲಿ ಮೂಡಿಬಂದ ಸ್ವಾತಂತ್ರ‍್ಯ ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕ ಪ್ರೇಕ್ಷಕರ ಮನ ಗೆದ್ದಿತು.

ಧಾರವಾಡ:

ಸಾಮಾನ್ಯವಾಗಿ ಪ್ರತಿ ವರ್ಷ ಧ್ವಜಾರೋಹಣ, ಭಾಷಣ, ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಮೀತವಾಗಿದ್ದ ಸ್ವಾತಂತ್ರ್ಯೋತ್ಸವ ಈ ಬಾರಿ ವಿಶೇಷವಾಗಿತ್ತು. ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಳನ್ನು ಜನರಿಗೆ ಮತ್ತೊಮ್ಮೆ ಕಟ್ಟಿಕೊಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಕಲ್ಪನೆಯಲ್ಲಿ ಮೂಡಿಬಂದ ಸ್ವಾತಂತ್ರ‍್ಯ ಧಾರೆಯ ಸಮರ ಧೀರರು ಎಂಬ ನೃತ್ಯ ರೂಪಕ ಪ್ರೇಕ್ಷಕರ ಮನ ಗೆದ್ದಿತು.

ಶಂಕರ್ ಹಲಗತ್ತಿ ಸಂಚಾಲಕತ್ವದ ಮತ್ತು ನಟ, ಸಂಗೀತಗಾರ ಗದಿಗಯ್ಯ ಹಿರೇಮಠ ರಚಿಸಿ, ಸಂಗೀತ ಸಂಯೋಜಿಸಿದ ನೃತ್ಯ ರೂಪಕ ಅದ್ಭುತವಾಗಿ ಪ್ರದರ್ಶನಗೊಂಡಿತು. ರಾಜೀವ್ ಗಾಂಧಿ ಶಾಲೆ ಮಕ್ಕಳಿಂದ ಪ್ರಮೀಳಾ ಜಕ್ಕಣ್ಣವರ ನಿರ್ದೇಶನದ ಕಿತ್ತೂರು ರಾಣಿ ಚೆನ್ನಮ್ಮ, ಮಂಜುನಾಥೇಶ್ವರ ಶಾಲೆ ಮಕ್ಕಳಿಂದ ಸಿಕಂದರ ದಂಡಿನ ನಿರ್ದೇಶನದ ಮುಂಡರಗಿ ಭೀಮರಾಯ ರೂಪಕ ಮತ್ತು ಕಿಟಲ್ ವಿಜ್ಞಾನ ಪಿಯು ಕಾಲೇಜಿನ ಮಕ್ಕಳಿಂದ ಸೋಮಶೇಖರ ಕಾರಿಗನೂರ ನಿರ್ದೇಶನದ ನರಗುಂದದ ಬಾಬಾ ಸಾಹೇಬ್ ರೂಪಕ ಮತ್ತು ಮಹೇಶ ಪಿಯು ಕಾಲೇಜು ಮಕ್ಕಳಿಂದ ಲಾಲಸಾಬ ನದಾಫ ನಿರ್ದೇಶನದ ಧಾರವಾಡದ ಖಿಲಾಪತ್ ಚಳವಳಿ ರೂಪಕ ಹಾಗೂ ಸತ್ಯಸಾಯಿ ಮಹಿಳಾ ಪಿಯು ಕಾಲೇಜು ಮಕ್ಕಳಿಂದ ಶೃತಿ ಹುರಳಿಕೊಪ್ಪ ನಿರ್ದೇಶನದ ಮೈಲಾರ ಮಹಾದೇವಪ್ಪ ರೂಪಕಗಳು ಪ್ರದರ್ಶನವಾದವು.

ಈ ಐದು ರೂಪಕಗಳಲ್ಲಿ ಒಟ್ಟು 500 ವಿದ್ಯಾರ್ಥಿಗಳು ಅಭಿನಯಿಸಿದರು. ರಾಘವ ಕಮ್ಮಾರ ಸಂಗೀತ ಸಂಯೋಜಿಸಿ, ವಿಶ್ವರಾಜ ರಾಜಗುರು ಅವರೊಂದಿಗೆ ಗಾಯನ ಪ್ರಸ್ತುತ ಪಡಿಸಿದರು. ಜಾನಪದ ಗಾಯನವನ್ನು ಡಾ. ರಾಮು ಮೂಲಗಿ ಅವರು, ನೃತ್ಯ ಸಂಯೋಜನೆಯನ್ನು ವಿಜೇತಾ ವರ್ಣೇಕರ ಮತ್ತು ಮಲ್ಲನಗೌಡ ಪಾಟೀಲ, ವಸ್ತ್ರ ವಿನ್ಯಾಸವನ್ನು ಮುಕ್ತಾ ವರ್ಣೇಕರ ಮಾಡಿದ್ದರು.

ವಿಜೇತರು.

ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ಪಥಸಂಚಲನದಲ್ಲಿ ಉತ್ತಮ್ಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಲಾಯಿತು. ಕವಾಯತು ಪಥ ಸಂಚಲನದಲ್ಲಿ ಎನ್.ಎ. ಮುತ್ತಣ್ಣ ಪೊಲೀಸ್‌ ಮಕ್ಕಳ ವಸತಿ ಶಾಲೆಗೆ ಪ್ರಥಮ, ಕಲಘಟಗಿ ತಾಲೂಕಿನ ಆಸ್ತಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ ಹಾಗೂ ಆದರ್ಶ ವಿದ್ಯಾಲಯಕ್ಕೆ ತೃತೀಯ ಬಹುಮಾನ ನೀಡಲಾಯಿತು. ನೆಲದ ಮೇಲೆ ಕುಳಿತು ರೂಪಕವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ವೀಕ್ಷಿಸಿದರು. ಮೊದಲ ಬಾರಿಗೆ ಇಡೀ ಕ್ರೀಡಾಂಗಣವು ಮಕ್ಕಳಿಂದ ತುಂಬಿತ್ತು. ಕ್ರೀಡಾಂಗಣದ ಹೊರ ಹಾಗೂ ಒಳಗೆ ಮಕ್ಕಳು ಕುಳಿತು ಒಂದು ಗಂಟೆ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡರು.

ನೂಲು ತೆಗೆದ ಮಕ್ಕಳು:

ಇಲ್ಲಿಯ ಬಾಲಬಳಗ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥ ಡಾ. ಸಂಜಿವ ಕುಲಕರ್ಣಿ ನೇತೃತ್ವದಲ್ಲಿ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಚರಕದ ಮೂಲಕ ಖಾದಿ ನೂಲು ತೆಗೆಯುವ ಪ್ರಾತ್ಯಕ್ಷಿಕೆ ನೀಡಿ ಸಾರ್ವಜನಿಕರಲ್ಲಿ ಖಾದಿ ಮಹತ್ವ, ಜಾಗೃತಿ ಮೂಡಿಸಿದರು. ಶಾಲಾ ಮಕ್ಕಳು ತಾವೇ ನೂಲು ತೆಗೆದು ಈ ಮೂಲಕ ಖಾದಿ ಬಟ್ಟೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿದರು.

Share this article