ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ: ಡಾ. ತೋಂಟದ ಸಿದ್ಧರಾಮ ಶ್ರೀಗಳು

KannadaprabhaNewsNetwork | Published : Jun 15, 2024 1:05 AM

ಸಾರಾಂಶ

ಯುವಕರು ದೇಶದ ಅಭಿವೃದ್ಧಿಯ ಕಡೆಗೆ ವಿಶೇಷ ಗಮನಹರಿಸಬೇಕು. ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ಯುವಕರು ದೇಶದ ಅಭಿವೃದ್ಧಿಯ ಕಡೆಗೆ ವಿಶೇಷ ಗಮನಹರಿಸಬೇಕು. ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ನಗರದ ಜ.ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2697ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಐಟಿಐ ತರಬೇತಿ ಕೇಂದ್ರಗಳು ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿವೆ. ನಮ್ಮ ಗುರುಗಳಾದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಐಟಿಐ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ, ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಯುವಕರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಪರಿಶ್ರಮಿಗಳಾಗಬೇಕು ಎಂದರು.

ಐಟಿಐ ತರಬೇತಿ ಮತ್ತು ಅದರ ಮಹತ್ವ ಕುರಿತು ಬೋಜರಾಜ ಸೊಪ್ಪಿಮಠ ಉಪನ್ಯಾಸ ನೀಡಿ, ಓದಲು, ಬರೆಯಲು, ಒಳ್ಳೆಯದು ಕೆಟ್ಟದ್ದನ್ನು ಅರಿಯಲು, ಜೀವನವನ್ನು ರೂಪಿಸಿಕೊಳ್ಳಲು, ಸೈದ್ಧಾಂತಿಕ ವಿಷಯಗಳಲ್ಲಿ ನಡೆಯಲು ಶಿಕ್ಷಣ ಬಹಳ ಅವಶ್ಯ. 10ನೇ ತರಗತಿಯಲ್ಲಿ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಲ್ಪಾವಧಿಯಲ್ಲಿ ನಮ್ಮ ಕೈಗಾರಿಕಾ ತರಬೇತಿ ಕೇಂದ್ರಗಳು ಭವಿಷ್ಯವನ್ನು ನೀಡುತ್ತಿವೆ ಎಂದರು.

ಅರಳಿ ನಾಗರಾಜ ಮಾತನಾಡಿ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ಕಲಿತವರೆಲ್ಲರೂ ನೌಕರಿಯ ಮೇಲೆ ಹೆಚ್ಚು ಅವಲಂಭನೆ ಆಗಬಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಾಮರ್ಥ್ಯ ಇರುತ್ತದೆ. ಆ ಸಾಮರ್ಥ್ಯ ಅರಿತು ಬೆಳೆಯಬೇಕು ಎಂದು ತಿಳಿಸಿದರು.

ಈ ವೇಳೆ ಹುಬ್ಬಳ್ಳಿಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಬೆಳಗಾವಿ ವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ಬಸವಪ್ರಭು ಹಿರೇಮಠ ಮಾತನಾಡಿದರು. ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ರಚಿಸಿದ ದೇಶದ ಚಿತ್ತ ಯುವಜನ ರತ್ತ ಕೃತಿಯ ಲೋಕಾರ್ಪಣೆ ಮಾಡಲಾಯಿತು. ಪ್ರತಿಭಾವಂತ ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಟೂಲ್‌ಕಿಟ್ ವಿತರಣೆ ಮಾಡಲಾಯಿತು.

ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸಾಕ್ಷಿ ರವಿ ದೇವರಡ್ಡಿ, ವಚನ ಚಿಂತನೆಯನ್ನು ರೇಖಾ ರವಿ ದೇವರಡ್ಡಿ ನೆರವೇರಿಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಶರಣ ಸಾಹಿತಿ ಎಸ್.ಆರ್. ನರೇಗಲ್ ಹಾಗೂ ನಿವೃತ್ತ ಶಿಕ್ಷಕರು ಮತ್ತು ಜೆ.ಟಿ.ವಿ.ಪಿ. ಐ.ಟಿ.ಐ. ಸಿಬ್ಬಂದಿ ವರ್ಗ ಅವರನ್ನು ಪೂಜ್ಯರು ಸನ್ಮಾನಿಸಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.

Share this article