ಕನ್ನಡಪ್ರಭ ವಾರ್ತೆ ಬಾಗೂರು
ದೇಶ ಅಭಿವೃದ್ಧಿ ಹೊಂದಲು ಮಹಿಳೆಯರ ಆರ್ಥಿಕ ಶಿಸ್ತಿನಿಂದ ಸಾಧ್ಯವಾಗಿದ್ದು ಕುಟುಂಬ ನಡೆಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಹೋಬಳಿಯ ನವಿಲೆ ಹೊಸೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಲಕ್ಷ್ಮೀದೇವಿ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 30ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ತನ್ನ ಗಂಡ ದುಡಿದು ತರುವ ಹಣವನ್ನು ಇತಿಮಿತಿಯಾಗಿ ಬಳಸಿ ಉಳಿತಾಯಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರ ಈ ಮನೋಭಾವದಿಂದ ದೇಶ ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ದೇಶವು ಕೂಡ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.
ಗ್ರಾಮದ ಶ್ರೀ ಲಕ್ಷ್ಮಿ ದೇವಿ ಸಂಘವು ಕಳೆದ 30 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು, ಕಳೆದ 30 ವರ್ಷಗಳಿಂದ ಇಲ್ಲಿಯವರೆಗೆ ಸುಮಾರು 1 ಕೋಟಿ 28 ಲಕ್ಷ ವಹಿವಾಟನ್ನು ನಡೆಸಿದೆ. ಸಂಘದಲ್ಲಿರುವ ಅನೇಕರು ಸಂಘದಲ್ಲಿ ಸಿಗುವ ಸಾಲವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಸಂಘ ಇದೇ ರೀತಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದರು. ನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಈಗಾಗಲೇ ಕೃಷಿ ಪತ್ತಿನ ವ್ಯಾಪ್ತಿಯ ಸ್ವಸಹಾಯ ಸಂಘಗಳಿಗೆ ಸುಮಾರು 80 ಲಕ್ಷ ಸಾಲ ನೀಡಲಾಗಿದೆ ಮುಂಬರುವ ದಿನಗಳಲ್ಲೂ ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸುವಂತೆ ತಿಳಿಸಲಾಗಿದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಬಡ್ಡಿ ಕೂಡ ಕಡಿಮೆಯಾಗಲಿದೆ ಎಂದರು.
ನವಿಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳು ರಸ್ತೆ ಒಳಚರಂಡಿ ನಿರ್ಮಾಣ ಜೊತೆಗೆ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ನವೀಕರಣಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ದೇವಿ ಸ್ವಸಹಾಯ ಸಂಘದ ಹಿರಿಯ ಸದಸ್ಯರುಗಳನ್ನು ಶಾಸಕ ಬಾಲಕೃಷ್ಣ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಗ್ರಾಪಂ ಅಧ್ಯಕ್ಷೆ ಪವಿತ್ರ ಪರಮೇಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹೊಸೂರು ಚಂದ್ರಪ್ಪ, ಉದ್ಯಮಿ ಚಿಪ್ಪಿನ ಚಂದ್ರು, ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಎನ್ ಮಂಜುನಾಥ್, ಶ್ರೀ ನವಿಲೆ ನಾಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎನ್. ಬಿ. ನಾಗರಾಜ್, ಜಿಲ್ಲಾ ವೀರಶೈವ ಸಮಾಜ ಕಾರ್ಯದರ್ಶಿ ಎಂ ಎಸ್ ಸುರೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಸವರಾಜ್, ನಕ್ಷತ್ರ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಚಂದ್ರಪ್ಪ, ಕಾರ್ಯದರ್ಶಿ ಭಾರತಿ, ನವಿಲೆ ಕೃಷಿ ಪತ್ತಿನ ಸಹ ಕಾರ್ಯದರ್ಶಿ ಶೋಭಾ, ಸೇರಿದಂತೆ ಶ್ರೀ ಲಕ್ಷ್ಮಿ ದೇವಿ ಸ್ವಸಹಾಯ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಫೋಟೋ ಸುದ್ದಿ : ಬಾಗೂರು ಹೋಬಳಿಯ ನವಿಲೆ ಹೊಸೂರು ಗ್ರಾಮದ ಶ್ರೀ ಲಕ್ಷ್ಮೀದೇವಿ ಮಹಿಳಾ ಸ್ವಸಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 30ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರನ್ನು ಶಾಸಕ ಸಿಎನ್ ಬಾಲಕೃಷ್ಣ ಸನ್ಮಾನಿಸಿದರು.