ಗುಂಡಿಬಿದ್ದಿರುವ ರಸ್ತೆಯಲ್ಲಿ ಗಿಡ ನೆಟ್ಟು ಆಕ್ರೋಶ

KannadaprabhaNewsNetwork |  
Published : Oct 27, 2025, 12:00 AM IST
26ಎಚ್ಎಸ್ಎನ್8 :  | Kannada Prabha

ಸಾರಾಂಶ

ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಕೌಡಳ್ಳಿ ಮತ್ತು ಪಟ್ಟಣದ ನಡುವಿನ ರಸ್ತೆ ಪ್ರಮುಖ ಸಂಚಾರ ಮಾರ್ಗವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಹೊರವರ್ತುಲ ರಸ್ತೆ ಕಾಮಗಾರಿ ಪ್ರಾರಂಭಿಸಿದ ಬಳಿಕ ಹಳೆಯ ರಸ್ತೆ ನಿರ್ಲಕ್ಷ್ಯಕ್ಕೆ ಒಳಪಟ್ಟಿತು. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಪುನರ್‌ನಿರ್ಮಾಣವಾಗಬೇಕಾಗಿದ್ದರೂ ಯಾವುದೇ ಇಲಾಖೆ ಈ ಕುರಿತು ಗಮನಹರಿಸದ ಕಾರಣ ರಸ್ತೆ ಎಲ್ಲೆಡೆ ಗುಂಡಿಬಿದ್ದು ಸಂಚಾರ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ದೂರಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೌಡಳ್ಳಿ–ಸಕಲೇಶಪುರ ರಸ್ತೆ ತುಂಬಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಹಾಗೂ ಪುರಸಭಾ ವ್ಯಾಪ್ತಿಯ ನಾಗರಿಕರು ಭಾನುವಾರ ಪ್ರತಿಭಟನೆ ನಡೆಸಿ ರಸ್ತೆಯನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದರು.

ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಕೌಡಳ್ಳಿ ಮತ್ತು ಪಟ್ಟಣದ ನಡುವಿನ ರಸ್ತೆ ಪ್ರಮುಖ ಸಂಚಾರ ಮಾರ್ಗವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ಹೊರವರ್ತುಲ ರಸ್ತೆ ಕಾಮಗಾರಿ ಪ್ರಾರಂಭಿಸಿದ ಬಳಿಕ ಹಳೆಯ ರಸ್ತೆ ನಿರ್ಲಕ್ಷ್ಯಕ್ಕೆ ಒಳಪಟ್ಟಿತು. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಪುನರ್‌ನಿರ್ಮಾಣವಾಗಬೇಕಾಗಿದ್ದರೂ ಯಾವುದೇ ಇಲಾಖೆ ಈ ಕುರಿತು ಗಮನಹರಿಸದ ಕಾರಣ ರಸ್ತೆ ಎಲ್ಲೆಡೆ ಗುಂಡಿಬಿದ್ದು ಸಂಚಾರ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ದೂರಿದರು.ಈ ರಸ್ತೆ ಮೂಲಕ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕೌಡಳ್ಳಿ ಜೆ.ಎಸ್‌.ಎಸ್‌. ವಿದ್ಯಾಸಂಸ್ಥೆ, ಗಣಪಯ ಬುದ್ಧಿಮಾಂದ್ಯ ಶಾಲೆ ಹಾಗೂ ಪಟ್ಟಣದ ವಿವಿಧ ಕಾಲೇಜುಗಳಿಗೆ ತೆರಳುತ್ತಾರೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಸಂಚರಿಸಲು, ಜನರು ನಡೆದಾಡಲು ಸಹ ಅಸಾಧ್ಯವಾಗಿದೆ. ಮಕ್ಕಳು ಮತ್ತು ವಾಹನ ಸವಾರರು ಅಪಾಯದ ನಡುವೆಯೇ ಸಂಚರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ನಾಲ್ವರು ಸಾವನ್ನಪ್ಪಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಮಾಡುವ ವೇಳೆ ಗ್ರಾಮಸ್ಥರು ಹಾಗೂ ಪಟ್ಟಣ ನಿವಾಸಿಗಳ ಅನುಕೂಲವನ್ನು ಪರಿಗಣಿಸದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಾರೆ. ಈ ದುಸ್ಥಿತಿಗೆ ಅವರೇ ಹೊಣೆಗಾರರು. ಹಲವು ಬಾರಿ ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿಗಳು ಆಗಮಿಸದಿದ್ದ ಕಾರಣ ಪ್ರತಿಭಟನಾಕಾರರು ಅಸಮಾಧಾನಗೊಂಡು, ಗುಂಡಿಬಿದ್ದಿರುವ ರಸ್ತೆಯಲ್ಲಿ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಗ್ರಾಮಸ್ಥರು ಜಿಲ್ಲಾ ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದು, ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚಿ ಪುನರ್‌ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಬೃಹತ್ ಮಟ್ಟದ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ತಿಮ್ಮಯ್ಯ, ರಮೇಶ್, ಕುಮಾರ್, ಕಂಟ್ರಾಕ್ಟರ್ ರಮೇಶ್, ಭಾಸ್ಕರ್ ನಾಯ್ಡು, ಕಾಳಯ್ಯ, ಸಂದೇಶ್, ಮೋಹನ್ ಕುಮಾರ, ಗಣೇಶ್, ದೇವಪ್ಪ, ಚಂದ್ರಶೇಖರ್ ಮತ್ತು ಕುಮಾರಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!