ಹುಬ್ಬಳ್ಳಿ:
ನಗರದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಎಚ್.ಎಂ. ಕುಂದರಗಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾದರೆ ಅಲ್ಲಿನ ಮಕ್ಕಳೆಲ್ಲ ಉತ್ತಮ ಶಿಕ್ಷಣ ಪಡೆದು ಉದ್ಯೋಗವಂತರು, ಉದ್ಯಮಪತಿಗಳೂ ಆಗುತ್ತಾರೆ. ಆಗ ಭಾರತ ಒಂದು ಸಮೃದ್ಧ, ಸದೃಢ ರಾಷ್ಟ್ರವಾಗುತ್ತದೆ ಎಂದರು.
ಹಲವು ಸಂದರ್ಭಗಳಲ್ಲಿ ಸರ್ಕಾರದಿಂದಲೇ ಈ ಸೌಲಭ್ಯಗಳು ಸಿಗುವುದು ಕಷ್ಟ. ಆಗ ಸಮಾಜವೇ ಆಯಾ ಶಾಲೆಗಳಿಗೆ ನೆರವಿಗೆ ಮುಂದಾಗಬೇಕು. ನಾರಾಯಣ ಪಾಂಡುರಂಗಿ ಅವರಂತ ಸೇವಾನಿಷ್ಟರು ತಾವು ಕಲಿತ ಶಾಲೆಗೆ ಬೆನ್ನೆಲುವಾಗಿ ನಿಂತಿದ್ದರಿಂದ ಹಳೇಹುಬ್ಬಳ್ಳಿಯ ನಂ-1 ಶಾಲೆ ಸರ್ವ ರೀತಿಯಿಂದ ಅಭಿವೃದ್ಧಿ ಹೊಂದಿ ಪ್ರಧಾನ ಶಿಕ್ಷಕ ಕುಂದರಗಿ ಅವರಿಗೆ ರಾಜ್ಯಪ್ರಶಸ್ತಿ ಲಭಿಸುವಂತಾಯಿತು. ಇಂಥ ಮುಂದಾಳುಗಳ ಅಗತ್ಯ ಈ ನಾಡಿಗಿದೆ ಎಂದು ಡಾ. ವರ್ದನ್ ಹೇಳಿದರು.ಹಿರಿಯ ಶಿಕ್ಷಕ ಮುಖಂಡ ಷಣ್ಮುಖ ಗುರಿಕಾರ ಅವರು, ಶಿಕ್ಷಕರ ಸಂಘಟನೆ ಮತ್ತು ಹೋರಾಟದಿಂದಾಗಿ ಉತ್ತರ ಕರ್ನಾಟಕದ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಳು ದಕ್ಕುವಂತೆ ಮಾಡಿದ್ದೇವೆ. ಆದರೆ, ರಾಷ್ಟ್ರಪ್ರಶಸ್ತಿಗೆ ಆನ್‌ಲೈನ್ ಮೂಲಕ ನಾಮಿನೇಷನ್ ವ್ಯವಸ್ಥೆ ಇರುವುದರಿಂದ ಮುಂಬರುವ ದಿನಗಳಲ್ಲಿ ಕರ್ನಾಟಕಕ್ಕೆ ರಾಷ್ಟ್ರಪ್ರಶಸ್ತಿ ದುಸ್ತರವಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಎಚ್.ಎಂ. ಕುಂದರಗಿ ಅನುಭವ ಹಂಚಿಕೊಂಡರು. ಜಯಶ್ರೀ ವರೂರ, ವಿ.ಎಫ್.ಚುಳಕಿ, ಎಂ.ಎಸ್.ಶಿವಳ್ಳಿಮಠ, ನಾರಾಯಣ ಪಾಂಡುರಂಗಿ, ನಾರಾಯಣ ಭಜಂತ್ರಿ, ರಾಜೇಂದ್ರ ಬಿದರಿ ಮುಂತಾದವರು ಮಾತನಾಡಿ ಕುಂದರಗಿ ಅವರ ಸಾಧನೆ ಬಣ್ಣಿಸಿದರು.
ವಿಶ್ರಾಂತ ಬಿಇಒ ಬಸವರಾಜ ಶಿವಪುರ, ಸಹದೇವ ಮಾಳಗಿ, ಪ್ರೇಮನಾಥ ಚಿಕ್ಕತುಂಬಳ, ಸುಭಾಷ್ ಕಾನಡೆ, ತೋಟಪ್ಪ ನಿಡಗುಂದಿ, ಯಲ್ಲಪ್ಪ ಬಣವಿ, ಯಲ್ಲಪ್ಪ ಶೆರೆವಾಡ, ಮಂಜುನಾಥ ಜಂಗಳಿ, ಮೋತಿಲಾಲ ರಾಠೋಡ ಮತ್ತಿತರರು ವೇದಿಕೆಯಲ್ಲಿದ್ದರು.ಬಳಿಕ ಕುಂದರಗಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.