ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ

KannadaprabhaNewsNetwork |  
Published : Mar 23, 2026, 02:30 AM IST
ಕಾರಟಗಿ ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಶಿವರಾಜ ತಂಗಡಗಿ ಭಾಗಿಯಾಗಿದ್ದರು. | Kannada Prabha

ಸಾರಾಂಶ

ನಮ್ಮ ಸರ್ಕಾರ ಹಣ ಬಿಡುಗಡೆ ಮಾಡಿ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದೇವೆ

ಕಾರಟಗಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಕೊರೋನಾ ಬರುತ್ತದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ ಆರಂಭವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಕಚೇರಿ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಹಣ ನೀಡಿರಲಿಲ್ಲ. ಪ್ರಧಾನಮಂತ್ರಿ ಮೋದಿಯಿಂದ ಹಿಡಿದು ಮಂಡಲ ಅಧ್ಯಕ್ಷರ ವರೆಗೂ ಬರಿ ಸುಳ್ಳು ಹೇಳುತ್ತಾ ಜನರನ್ನು ಯಾಮಾರಿಸುತ್ತಿರುತ್ತಾರೆ ಎಂದು ಛೇಡಿಸಿದರು.

ನಮ್ಮ ಸರ್ಕಾರ ಹಣ ಬಿಡುಗಡೆ ಮಾಡಿ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೊರೋನಾ ಬಂದಂತೆ. ಅದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಪರ್ವ ಆರಂಭವಾದಂತೆ. ಸುಖಾಸುಮ್ಮನೆ ಯಾವ ಕಾಮಗಾರಿ ನಡೆದಿಲ್ಲ ಎಂದು ಕುಂಟು ನೆಪ ಹೇಳಿ ಬಿಜೆಪಿ ಆರೋಪ ಮಾಡುತ್ತಿದೆ ಎಂದರು.

ಯುದ್ಧ ನಡೆಯುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಸಂಸತ್‌ನಲ್ಲಿ ಮೋದಿ ಸರ್ಕಾರ ಯುದ್ಧ ನಡೆದರೂ ನಮ್ಮಲ್ಲಿ ೬ ತಿಂಗಳಿಗೆ ಆಗುವಷ್ಟು ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿ ದಾಸ್ತಾನು ಇದೆ ಎಂದು ಹೇಳಿಕೆ ಕೊಟ್ಟಿದೆ. ಆದರೆ, ದೇಶದಲ್ಲಿ ಈ ಮೂರು ವಸ್ತುಗಳ ಕೊರತೆ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳವಾಗಿದೆ. ಸುಳ್ಳು ಹೇಳುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದು ಯಾಕೆ ಎಂದು ಸಚಿವ ತಂಗಡಗಿ ಪ್ರಶ್ನಿಸಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ರಸ್ತೆ, ವಿವಿಧ ಸಮುದಾಯಗಳ ಸಮುದಾಯ ಭವನ, ಬ್ರಿಡ್ಜ್ ಕಂ ಬ್ಯಾರೇಜ್, ಶಾಲಾ ಕೊಠಡಿ, ಶಾದಿ ಮಹಲ್, ಅಂಗನವಾಡಿ ಕೇಂದ್ರ, ಪ್ರಜಾಸೌಧ, ಇಂದಿರಾ ಕ್ಯಾಂಟೀನ್, ವಸತಿ ನಿಲಯ ಹೀಗೆ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಅಭಿವೃದ್ಧಿ ಪರ್ವವೇ ಆರಂಭಿಸಿದ್ದೇವೆ ಎಂದರು.

ಗಾಲಿಗೆ ಟಾಂಗ್: ಇನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಮಾಡಲು ಆನೆಗೊಂದಿ, ಗಂಗಾವತಿ ಬೇಕು. ಅವರಿಗೆ ಇಲ್ಲಿಯ ಬಗ್ಗೆ ಏನೂ ಗೊತ್ತಿದೆ? ಸದನದಲ್ಲಿ ಬಳ್ಳಾರಿ ಬಗ್ಗೆ ಕಾಳಜಿ, ಕಳಕಳಿ ತೋರುವ ರೆಡ್ಡಿ, ರಾಜಕಾರಣ ಮಾಡಲು ಆನೆಗೊಂದಿ ಉತ್ಸವದತ್ತ ಬೊಟ್ಟು ಮಾಡುತ್ತಾರೆ. ಅವರ ಹೇಳಿಕೆಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.

ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೆ ಗೆಲುವು ಸಾಧಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರಟಗಿ ತಾಲೂಕಿನಲ್ಲಿ ೩೧,೪೭೭ ಸಾವಿರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ೨೫ ಸಾವಿರ ಕುಟುಂಬಗಳು, ಅನ್ನಭಾಗ್ಯ ಯೋಜನೆಯಲ್ಲಿ ೧,೧೫,೫೬೯ ಫಲಾನುಭವಿಗಳು ಉಪಯೋಗ ಪಡೆಯುತ್ತಿದ್ದಾರೆ. ಕಾರಟಗಿ ಬಸ್ ನಿಲ್ದಾಣದಿಂದ ಶಕ್ತಿ ಯೋಜನೆಯಲ್ಲಿ ೩೫ ಸಾವಿರಕ್ಕೂ ಹೆಚ್ಚು ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ. ಯುವ ನಿಧಿಯಲ್ಲಿ ೨೧೧೬ ಪದವಿ, ಡಿಪ್ಲೊಮಾ ಯುವಕರು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಪಂಚ ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಜನತೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂತಹ ದೊಡ್ಡ ಯೋಜನೆ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ. ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಯಶಸ್ವಿ ಯೋಜನೆಯಾಗಿ ಮುಂದುವರಿದಿದೆ. ಕಾರಟಗಿ ತಾಲೂಕಿನ ಗ್ಯಾರಂಟಿ ಯೋಜನೆಯ ೩೧ ಸಾವಿರ ಫಲಾನುಭವಿಗಳಿದ್ದು, ಅದರೊಂದಿಗೆ ಕನಕಗಿರಿ, ಗಂಗಾವತಿ ಒಳಗೊಂಡು ಬೃಹತ್ ಸಮಾವೇಶ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ
ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ